ಪ್ರಾಥಮಿಕ ಶಾಲೆ ಶೀಘ್ರವೇ ತೆರೆಯಿರಿ: ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಮೊಯುದ್ದೀನ್ ಕುಟ್ಟಿ
ಮಂಗಳೂರು, ಫೆ.14: ಕರ್ನಾಟಕ ಶಿಕ್ಷಣ ಇಲಾಖೆಯು ಈಗಾಗಲೇ ಆಯ್ದ ಶಾಲೆಗಳನ್ನು ತೆರೆದಿದೆ. ಆದರೆ 1ರಿಂದ 5ನೇ ತರಗತಿಗಳನ್ನು ಇಲ್ಲಿಯವರೆಗೂ ತೆರೆಯಲಾಗುವುದಿಲ್ಲ ಎಂಬ ಮಾಹಿತಿ ಇದ್ದು, ಕೂಡಲೇ ತರಗತಿಗಳು ಆರಂಭವಾಗಲಿ ಎಂದು ‘ಮಕ್ಕಳ ನಡೆ ಶಾಲೆಯ ಕಡೆ’ ಅಭಿಯಾನದ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಮೊಯುದ್ದೀನ್ ಕುಟ್ಟಿ ತಿಳಿಸಿದ್ದಾರೆ.
ಕೋವಿಡ್- ಇದೊಂದು ಮಾನವ ನಿರ್ಮಿತ ಬಿಕ್ಕಟ್ಟಾಗಿದ್ದು, ಇದನ್ನು ಸಂಪೂರ್ಣವಾಗಿ ತಪ್ಪಿಸಬೇಕು. 9ರಿಂದ 12 ನೇ ತರಗತಿಗಳು ನಿಯಮಿತ ತರಗತಿಗಳನ್ನು ಹೊಂದಿವೆ. ಮತ್ತು 6ರಿಂದ 8ನೇ ತರಗತಿಗಳು ಮಧ್ಯಂತರ ತರಗತಿ ಹೊಂದಿವೆ. ಆದರೆ ಪ್ರಾಥಮಿಕ ಹಂತ ಇದರಿಂದ ವಂಚಿತಕ್ಕೊಳಗಾಗಿದೆ. ಕಳೆದ ವಾರ ಬಿಡುಗಡೆಯಾದ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಂಶೋಧನಾ ವರದಿಯು ಮಕ್ಕಳ ಕಲಿಕೆಗೆ ಸಂಬಂಧಿಸಿದಂತೆ ಕೆಲವು ಆತಂಕಕಾರಿ ಅಂಶಗಳನ್ನು ಪತ್ತೆ ಮಾಡಿದೆ ಎಂದರು.
ಎಲ್ಲ ವರ್ಗಗಳಲ್ಲಿ ಸರಾಸರಿ ಶೇ.92 ಮಕ್ಕಳು ಹಿಂದಿನ ವರ್ಷಕ್ಕಿಂತ ಕನಿಷ್ಠ ಒಂದು ನಿರ್ದಿಷ್ಟ ಭಾಷಾ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಎಲ್ಲ ವರ್ಗಗಳಲ್ಲೂ ಹಿಂದಿನ ವರ್ಷಕ್ಕಿಂತ ಸರಾಸರಿ ಶೇ.82 ಮಕ್ಕಳು ಕನಿಷ್ಠ ಒಂದು ನಿರ್ದಿಷ್ಟ ಗಣಿತ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಈ ಒಟ್ಟಾರೆ ಕಲಿಕೆಯ ನಷ್ಟ, ಹಿಂದಿನ ತರಗತಿಯಲ್ಲಿ ಮಕ್ಕಳು ಕಲಿತದ್ದನ್ನು ಹಾಗೂ ಪ್ರಸ್ತುತ ತರಗತಿಯಲ್ಲಿ ಕಲಿಯಲು ಅವರಿಗೆ ಅವಕಾಶ ಸಿಗದಿದ್ದನ್ನು (ಕಲಿಕೆಯ ಹಿಂಜರಿತ ಅಥವಾ ಮರೆತುಬಿಡುವುದು) ಮುಂದಿನ ವರ್ಷಗಳಲ್ಲಿ ಸಂಚಿತ ನಷ್ಟಕ್ಕೆ ಕಾರಣವಾಗಲಿದೆ. ಇದು ಮಕ್ಕಳ ಶೈಕ್ಷಣಿಕ ಸಾಧನೆ; ಅವರ ವಯಸ್ಕ ಜೀವನದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಕೋವಿಡ್ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳವು ಕಂಡುಬಂದಿಲ್ಲ. ಕೋವಿಡ್ ಚಿಕ್ಕ ಮಕ್ಕಳ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂಬುದು ಅಂಗೀಕರಿಸಲ್ಪಟ್ಟ ಸಾರ್ವತ್ರಿಕ ವೈದ್ಯಕೀಯ ಸಂಗತಿಯಾಗಿದೆ. ಸರಕಾರ 1ರಿಂದ 5ನೇ ತರಗತಿಗಳನ್ನು ತೆರೆಯದಿರಲು ಯಾವುದೇ ವೈದ್ಯಕೀಯ ಕಾರಣಗಳು ಇರಲಾರದು. ಬೇರೆ ಕಾರಣವಿದ್ದರೆ ಅದನ್ನು ಸರಕಾರ ಬಹಿರಂಗಪಡಿಸಬೇಕು ಎಂದು ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಮೊಯುದ್ದೀನ್ ಕುಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.