ಹಿಂದೂಗಳ ಮೇಲಿನ ಆಕ್ರಮಣ ಸಹಿಸಲ್ಲ: ಮುರಳೀಕೃಷ್ಣ ಹಸಂತಡ್ಕ
ಮಂಗಳೂರು, ಫೆ.14: ಹಿಂದೂಗಳ ಧಾರ್ಮಿಕ ನಂಬಿಕೆ, ಶ್ರದ್ಧಾಕೇಂದ್ರ, ಗೋಮಾತೆ, ಹೆಣ್ಣುಮಕ್ಕಳ ಮೇಲೆ ಆಕ್ರಮಣ ಮಾಡಿದರೆ ಸಹಿಸಿಕೊಂಡು ಕುಳಿತುಕೊಳ್ಳುವುದಿಲ್ಲ ಎಂದು ಬಜರಂಗದಳ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್-ಬಜರಂಗದಳ ಮಂಗಳೂರು-ಬೋಳಾರ ಪ್ರಖಂಡ ವತಿಯಿಂದ ನಗರದ ಮಂಗಳಾದೇವಿ ದೇವಸ್ಥಾನ ಮುಂಭಾಗ ರವಿವಾರ ನಡೆದ ಹಿಂದೂ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ್ರೋಹಿ, ರಾಷ್ಟ್ರದ್ರೋಹಿ ಶಕ್ತಿಗಳನ್ನು ಎದುರಿಸುವ ಶಕ್ತಿ ನಮಗಿದೆ. ಹಿಂದೂಗಳ ನಂಬಿಕೆಗಳ ಮೇಲೆ ನಡೆಸಿದರೆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನೀಡಲು ಕಾರ್ಯಕರ್ತರು ಸಿದ್ಧರಾಗಿದ್ದಾರೆ ಎಂದರು.
ಮಂಗಳೂರಿನಲ್ಲಿ ಉಗ್ರರ ಪರ ಗೋಡೆಬರಹ ಮೂಲಕ ಇಲ್ಲೂ ಭಯೋತ್ಪಾದಕರ ಬೆಂಬಲಿಗರಿದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ. ಧಾರ್ಮಿಕ ಕ್ಷೇತ್ರಗಳ ಕಾಣಿಕೆ ಹುಂಡಿ ಅಪವಿತ್ರಗೊಳಿಸುತ್ತಿದ್ದಾರೆ. ಹಿಂದೂ ಯುವಕರ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ, ಚೂರಿ ಇರಿತ, ಉಳ್ಳಾಲ ಪರಿಸರದಲ್ಲಿ ಶ್ರದ್ಧಾಕೇಂದ್ರ, ಭಗವಾಧ್ವಜದ ಮೇಲೆ ಮಲಮೂತ್ರ ವಿಸರ್ಜನೆ, ಲವ್‌ಜಿಹಾದ್, ಅತ್ಯಾಚಾರ, ನಿರಂತರ ಗೋಹತ್ಯೆ ಮೂಲಕ ಆಕ್ರಮಣ ಎಸಗುತ್ತಿದ್ದು, ಇದರ ವಿರುದ್ಧ ಸೂಕ್ತ ಪ್ರತಿಕ್ರಿಯೆ ನೀಡಲು ಸನ್ನದ್ಧರಾಗಿದ್ದೇವೆ ಎಂದರು.
ಬಜರಂಗದಳ ಮಂಗಳೂರು ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಮಾತನಾಡಿದರು.
ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಬೋಳಾರ ಪ್ರಖಂಡ ಕಾರ್ಯದರ್ಶಿ ನಿತೇಶ್ ಉಪಸ್ಥಿತರಿದ್ದರು. ವಿಹಿಂಪ ಜಿಲ್ಲಾ ಸಹಕಾರ್ಯದರ್ಶಿ ರವಿ ಅಸೈಗೋಳಿ ಸ್ವಾಗತಿಸಿ, ನಿರೂಪಿಸಿದರು.