ಮಹಾರಾಷ್ಟ್ರ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಬಹಿರಂಗ ಸಮರ ಏರ್ಪಟ್ಟಿದೆ: ಸಂಜಯ್ ರಾವತ್

Update: 2021-02-15 04:50 GMT

ನಾಸಿಕ್: ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲ ಬಿ.ಎಸ್.ಕೊಶಯಾರಿ ಅವರನ್ನು ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ರಾಜಭವನದ ನಡುವೆ ಬಹಿರಂಗ ಸಮರ ಏರ್ಪಟ್ಟಿದೆ ಎಂದು ಶಿವಸೇನೆ ವಕ್ತಾರ ಮತ್ತು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಕೈಗೊಂಡ ಹಲವು ನಿರ್ಧಾರಗಳಿಗೆ ರಾಜ್ಯಪಾಲರ ಅನುಮೋದನೆ ಬೇಕು. ಆದರೆ ರಾಜಕೀಯ ಒತ್ತಡದಿಂದಾಗಿ ಅದು ಸಿಕ್ಕಿಹಾಕಿಕೊಂಡಿದೆ ಎಂದು ನಾಸಿಕ್‍ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ರಾವತ್ ಸುದ್ದಿಗಾರರ ಜತೆ ಮಾತನಾಡುತ್ತಾ ಆಪಾದಿಸಿದರು. ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಶೀತಲ ಸಮರ ನಡೆಯುತ್ತಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, "ಬಹಿರಂಗ ಸಮರ ನಡೆಯುತ್ತಿದೆ" ಎಂದು ಅವರು ಪ್ರತಿಕ್ರಿಯಿಸಿದರು.

"ಇದು ಶೀತಲ ಸಮರ ಅಲ್ಲ. ಶೀತಲ ಸಮರ ರಹಸ್ಯವಾಗಿ ನಡೆಯುತ್ತದೆ. ಇದು ಬಹಿರಂಗ ಸಮರ. ರಾಜಭವನವನ್ನು ಬಿಜೆಪಿ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ" ಎಂದು ದೂರಿದರು. ಇದು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಮರವೂ ಅಲ್ಲ. ಬಿಜೆಪಿ ರಾಜಭವನವನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದರು. 12 ಮಂದಿ ವಿಧಾನ ಪರಿಷತ್ ಸದಸ್ಯರ ನಾಮಕರಣ ಪ್ರಸ್ತಾವಕ್ಕೆ ರಾಜಭವನ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ದೂರಿದರು.

"ಅವರ ಅವಧಿ ಆರು ವರ್ಷಗಳಿಗೆ ಮುಗಿಯುತ್ತದೆ. ಅವರ ಅಧಿಕಾರಾವಧಿಯ ಅಮೂಲ್ಯ ಸಮಯ ವ್ಯರ್ಥವಾಗಿದೆ. ರಾಜಕೀಯ ಒತ್ತಡದ ಈ ವಿಳಂಬಕ್ಕೆ ಯಾರು ಹೊಣೆ" ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News