ಎರಡನೇ ಟೆಸ್ಟ್: ಅಶ್ವಿನ್ ಶತಕ, ಇಂಗ್ಲೆಂಡ್ ಗೆ ಕಠಿಣ ಗುರಿ ನೀಡಿದ ಭಾರತ

Update: 2021-02-15 10:20 GMT

ಚೆನ್ನೈ: ಲೋಕಲ್ ಹೀರೊ ರವಿಚಂದ್ರನ್ ಅಶ್ವಿನ್ ಆಕರ್ಷಕ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಸಂದರ್ಭೋಚಿತ ಅರ್ಧಶತಕದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ತಂಡಕ್ಕೆ ಎರಡನೇ ಟೆಸ್ಟ್ ಪಂದ್ಯದ ಗೆಲುವಿಗೆ 482 ರನ್ ಗುರಿ ನೀಡಿದೆ. 

ಭಾರತವು 2ನೇ ಇನಿಂಗ್ಸ್ ನಲ್ಲಿ 85.5 ಓವರ್ ಗಳಲ್ಲಿ 286 ರನ್ ಗಳಿಸಿ ಇಂಗ್ಲೆಂಡ್ ಗೆ ಕಠಿಣ ಗುರಿ ನೀಡಿತು. 
ಇಂಗ್ಲೆಂಡ್ ಪರವಾಗಿ ಜಾಕ್ ಲೀಚ್(4-100) ಹಾಗೂ ಮೊಯಿನ್ ಅಲಿ(4-98)ತಲಾ 4 ವಿಕೆಟ್ ಗಳನ್ನು ಪಡೆದರು. 

ತಂಡದ ಮುನ್ನಡೆ ಹೆಚ್ಚಲು ನೆರವಾದ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ 5ನೇ ಶತಕ (106 ರನ್, 148 ಎಸೆತ, 14 ಬೌಂಡರಿ, 1 ಸಿಕ್ಸರ್) ಸಿಡಿಸಿದರು. 134 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಶ್ವಿನ್ ಶತಕ ಪೂರೈಸಿದರು. ಅಶ್ವಿನ್ 3ನೇ ಬಾರಿ ಒಂದೇ ಟೆಸ್ಟ್ ನಲ್ಲಿ 5 ವಿಕೆಟ್ ಗೊಂಚಲು ಪಡೆದು, ಶತಕ ಸಿಡಿಸಿದ ಸಾಧನೆ ಮಾಡಿದರು.

ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ ಕೇವಲ 134 ರನ್ ಗೆ ನಿಯಂತ್ರಿಸಿ 195 ರನ್ ಮುನ್ನಡೆ ಪಡೆದಿದ್ದ ಭಾರತ ಎರಡನೇ ಇನಿಂಗ್ಸ್ ನಲ್ಲಿ 106 ರನ್ ಗೆ 6 ವಿಕೆಟ್ ಗಳನ್ನು ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದ್ದರೂ ನಾಯಕ ಕೊಹ್ಲಿ(62, 149 ಎಸೆತ, 7 ಬೌಂಡರಿ) ಹಾಗೂ ಅಶ್ವಿನ್ 7ನೇ ವಿಕೆಟ್ ಜೊತೆಯಾಟದಲ್ಲಿ 96 ರನ್ ಸೇರಿಸಿ ತಂಡವನ್ನು ಆಧರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News