ಒಂದೇ ಪಂದ್ಯದಲ್ಲಿ ಶತಕ, 5 ವಿಕೆಟ್: ಮೂರನೇ ಬಾರಿ ಈ ಸಾಧನೆ ಮಾಡಿದ ಅಶ್ವಿನ್

Update: 2021-02-15 12:18 GMT

ಚೆನ್ನೈ: ತಮಿಳುನಾಡಿನ ಆಟಗಾರ ರವಿಚಂದ್ರನ್ ಅಶ್ವಿನ್ ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ನ ಮೂರನೇ ದಿನವಾದ ಸೋಮವಾರ ವೃತ್ತಿಜೀವನದ 5ನೇ ಶತಕ ಸಿಡಿಸಿದರು. ಅಶ್ವಿನ್ ಟೆಸ್ಟ್ ಪಂದ್ಯವೊಂದರಲ್ಲಿ ಮೂರನೇ ಬಾರಿ ಶತಕ ಹಾಗೂ ಐದು ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ.

ಭಾರತವು ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ ಕೇವಲ 134 ರನ್ ಗೆ ನಿಯಂತ್ರಿಸಿದ್ದು, ಸ್ಪಿನ್ನರ್ ಅಶ್ವಿನ್ ಅವರು 43 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದಿದ್ದರು.

ಅಶ್ವಿನ್ ಚೆನ್ನೈ ಟೆಸ್ಟ್ ಗಿಂತ ಮೊದಲು ವೆಸ್ಟ್ ಇಂಡೀಸ್ ವಿರುದ್ಧ ಎರಡು ಬಾರಿ ಶತಕ ಹಾಗೂ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದರು. 2011ರಲ್ಲಿ ಮುಂಬೈನಲ್ಲಿ ಹಾಗೂ 2016ರಲ್ಲಿ ನಾರ್ತ್ ಸೌಂಡ್ ನಲ್ಲಿ ಈ ಸಾಧನೆ ಮಾಡಿದ್ದರು. ಮುಂಬೈನಲ್ಲಿ ಭಾರತವು ಇನಿಂಗ್ಸ್, 92 ರನ್ ಗಳಿಂದ ಜಯ ಸಾಧಿಸಿದ್ದರೆ, ನಾರ್ತ್ ಸೌಂಡ್ ನಲ್ಲಿ ಪಂದ್ಯ ಡ್ರಾ ಆಗಿತ್ತು.

ಇಂಗ್ಲೆಂಡ್ ನ ಇಯಾನ್ ಬೋಥಂ ತಾನಾಡಿದ್ದ 102 ಟೆಸ್ಟ್ ಪಂದ್ಯಗಳಲ್ಲಿ 5 ಬಾರಿ ಶತಕ ಹಾಗೂ 5 ವಿಕೆಟ್ ಗೊಂಚಲು ಪಡೆದಿದ್ದರು. ನಾಲ್ವರು ಆಲ್ ರೌಂಡರ್ ಗಳಾದ ಗ್ಯಾರಿ ಸೋಬರ್ಸ್, ಮುಷ್ತಾಕ್ ಮುಹಮ್ಮದ್, ಜಾಕ್ ಕಾಲಿಸ್  ಹಾಗೂ ಶಾಕಿಬ್ ಅಲ್ ಹಸನ್ 2 ಬಾರಿ ಈ ಸಾಧನೆ ಮಾಡಿದ್ದರು. ಇದೀಗ ಅಶ್ವಿನ್  ತಾನಾಡಿದ 76ನೇ ಟೆಸ್ಟ್ ನಲ್ಲಿ ಈ ನಾಲ್ವರ ದಾಖಲೆಯನ್ನು ಮುರಿದಿದ್ದಾರೆ.

ಸೋಮವಾರ ಮೂರನೇ ದಿನದಾಟದಲ್ಲಿ 134 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ ಶತಕವನ್ನು ಪೂರೈಸಿದ ಅಶ್ವಿನ್ ಒಟ್ಟು 106 ರನ್ ಗಳಿಸಿ ಔಟಾದರು. ಔಟಾಗುವ ಮೊದಲು ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ನಿರ್ಣಾಯಕ 96 ರನ್ ಜೊತೆಯಾಟ ನಡೆಸಿ ಭಾರತವು ಎರಡನೇ ಇನಿಂಗ್ಸ್ ನಲ್ಲಿ ಭಾರೀ ಮುನ್ನಡೆ ಪಡೆಯುವಲ್ಲಿ ಮುಖ್ಯ ಪಾತ್ರವಹಿಸಿದರು.

ಅಶ್ವಿನ್ ಬ್ಯಾಟಿಂಗ್ ಗೆ ಇಳಿದಾಗ ಭಾರತ 106 ರನ್ ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.  ಇಂಗ್ಲೆಂಡ್ ಸ್ಪಿನ್ನರ್ ಗಳಾದ ಮೊಯಿನ್ ಅಲಿ, ಜಾಕ್ ಲೀಚ್ ಹಾಗೂ ಜೋ ರೂಟ್ ವಿರುದ್ಧ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಅಶ್ವಿನ್ ಕೇವಲ 64 ಎಸೆತಗಳಲ್ಲಿ 50 ರನ್ ತಲುಪಿದರು.

ಮತ್ತೊಂದಡೆ ತಾಳ್ಮೆಯಿಂದ ಆಡಿದ ನಾಯಕ ಕೊಹ್ಲಿ 50 ರನ್ ಗಳಿಸಲು  107 ಎಸೆತವನ್ನು ಎದುರಿಸಿದರು. ವೇಗ ಹಾಗೂ ಸ್ಪಿನ್ನರ್ ಗಳನ್ನು ಸಮನಾಗಿ ಎದುರಿಸಿದ ಅಶ್ವಿನ್ ಅವರು ಒಂದೆಡೆ ಕೊಹ್ಲಿ, ಕುಲದೀಪ್ ಯಾದವ್ ಹಾಗೂ ಇಶಾಂತ್ ಶರ್ಮಾ ವಿಕೆಟ್ ಬಿದ್ದರೂ ದೃತಿಗೆಡದೆ ಬೌಲರ್ ಮುಹಮ್ಮದ್ ಸಿರಾಜ್ ಜೊತೆಗೂಡಿ ಶತಕವನ್ನು ಪೂರೈಸಿದರು.

ಅಶ್ವಿನ್ ಬೌಂಡರಿ ಬಾರಿಸುವ ಮೂಲಕ ತವರು ಮೈದಾನದಲ್ಲಿ ಶತಕವನ್ನು ತಲುಪಿದರು. ಅಶ್ವಿನ್ ಔಟಾಗುವದುರೊಂದಿಗೆ ಭಾರತವು 2ನೇ ಇನಿಂಗ್ಸ್ ನಲ್ಲಿ 286 ರನ್ ಗೆ ಆಲೌಟಾಯಿತು.  ಇಂಗ್ಲೆಂಡ್ ಗೆಲುವಿಗೆ 482 ರನ್ ಗುರಿ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News