ದಸಂಸ ಭೀಮವಾದದ ಹೆಸರು ದುರ್ಬಳಕೆ ವಿರುದ್ಧ ಕಾನೂನು ಹೋರಾಟ: ಪರಶುರಾಮ

Update: 2021-02-15 13:07 GMT

ಉಡುಪಿ, ಫೆ.15: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಯಿಂದ ಉಚ್ಛಾಟನೆಗೊಂಡ ನಾಯಕರು ನೋಂದಾಯಿತ ಹಾಗೂ ಕಾನೂನು ಬದ್ಧವಾಗಿರುವ ನಮ್ಮ ಸಂಘಟನೆಯ ಲಾಂಛನ, ಲೆಟರ್‌ಹೆಡ್, ಸೀಲು ದುರ್ಬಳಕೆ ಮಾಡಿಕೊಂಡಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ದಸಂಸ ಭೀಮವಾದ ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚ್ಛಾಟಿತರು ದಸಂಸ ಭೀಮಜ್ಯೋತಿ ಎಂಬ ನಿಷ್ಕ್ರೀಯಗೊಂಡ ಸಂಘಟನೆಯನ್ನು ಸುಳ್ಳು ದಾಖಲೆ ನೀಡಿ ಪುನರ್ ನವೀಕರಣ ಮಾಡಿದ್ದು, ಅದನ್ನು ನಮ್ಮ ಸಂಘಟನೆಯ ಹೆಸರಿಗೆ ಸರಿದೂಗುವ ರೀತಿಯಲ್ಲಿ ಸುಳ್ಳು ದಾಖಲೆಯನ್ನು ನೀಡಿ ಪೋರ್ಜರಿ ಸಹಿಗಳನ್ನು ಮಾಡಿ ಮತ್ತು ಸಭೆ, ಸಭಾನಡಾವಳಿಯನ್ನು ಸೃಷ್ಠಿಸಿ ದಸಂಸ ಭೀಮ ವಾದ ಎಂದು ಬದಲಾವಣೆ ಮಾಡಿದ್ದಾರೆ ಎಂದು ದೂರಿದರು.

ಈ ಎಲ್ಲ ಪ್ರಕ್ರಿಯೆಗಳಿಗೆ ಉಡುಪಿ ಜಿಲ್ಲಾ ಸಹಕಾರ ಸಂಘಗಳ ನೋಂದಣಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ಇದರಿಂದ ಮುಂದೆ ನಡೆಯುವ ಎಲ್ಲ ನಷ್ಟಗಳಿಗೆ ನೋಂದವಣಾಧಿಕಾರಿಗಳೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಆದುದರಿಂದ ಭೀಮಜ್ಯೋತಿ ಹೆಸರನ್ನು ಭೀಮವಾದ ಎಂದು ತಿದ್ದುಪಡಿ ಮಾಡಿದ ಸಂಘದ ಸಂಸ್ಥಾಪಕರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ಅವರು ನೀಡಿದರು.

ರಾಜ್ಯ ಸಂಘಟನಾ ಸಂಚಾಲಕ ಎಂ.ಸಿ.ನಾರಾಯಣ ಮಾತನಾಡಿ, ಎಸ್‌ಸಿ ಎಸ್‌ಟಿ ದೂರುಗಳಿಗೆ ಸಂಬಂಧಿಸಿ ಕೆಲವು ಕಡೆ ಪ್ರತಿದೂರುಗಳನ್ನು ನೀಡುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಪೊಲೀಸರು ಅವಕಾಶ ನೀಡದೆ ಎಸ್‌ಸಿಎಸ್‌ಟಿ ಗಳ ಪರವಾಗಿ ನಿಲ್ಲಬೇಕು. ರಾಜ್ಯ ಎಸ್‌ಸಿಎಸ್‌ಟಿ ಆಯೋಗಕ್ಕೆ ಪ್ರಕರಣ ದಾಖಲಿಸುವ ನ್ಯಾಯಾಧೀಕರಣದ ಅಧಿಕಾರವನ್ನು ನೀಡಬೇಕು. ಲೋಕಾಯುಕ್ತ ಸಂಸ್ಥೆಗೆ ಪರಮಾಧಿಕಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಭೀಮವಾದ ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ ಕಾಂಬಳೆ, ಪಡಿಯಪ್ಪ ಕಳ್ಳಿಮನೆ, ಯಮುನಪ್ಪ ಗುಣದಾಳ, ಸಿದ್ಧರಾಜು, ಜಿಲ್ಲಾ ಸಂಚಾಲಕ ವಿಶ್ವನಾಥ್ ಬೆಳ್ಳಂಪಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News