21ರಂದು ಬಸ್ರೂರಿನಲ್ಲಿ ಶಿವಾಜಿ ಪ್ರತಿಮೆ ಅನಾವರಣ, ಶೋಭಾಯಾತ್ರೆ
ಉಡುಪಿ, ಫೆ.15: ಯುವ ಬ್ರಿಗೇಡ್ ವತಿಯಿಂದ ಶಿವಾಜಿ ಮಹಾರಾಜ ಪೋರ್ಚುಗೀಸರ ವಿರುದ್ಧ ಪಡೆದ ಜಯದ ಸಂಭ್ರಮಾಚರಣೆಯ ಶೋಭಾ ಯಾತ್ರೆ ಹಾಗೂ ಶಿವಾಜಿ ಪ್ರತಿಮೆಯ ಅನಾವರಣ ಕಾರ್ಯಕ್ರಮವು ಫೆ.21 ರಂದು ಸಂಜೆ 4ಗಂಟೆಗೆ ಬಸ್ರೂರಿನಲ್ಲಿ ಜರಗಲಿದೆ.
ಉಡುಪಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬ್ರಿಗೇಡ್ ದ.ಕ. ವಿಭಾಗ ಸಂಚಾಲಕ ನಿರಂಜನ್ ಬಸ್ರೂರು, ಕ್ರಿ.ಶ.1525ರಲ್ಲಿ ಪೋರ್ಚು ಗೀಸರು ವ್ಯಾಪಾರಕ್ಕಾಗಿ ಬಸ್ರೂರಿಗೆ ಬಂದಿದ್ದು, ವಿದೇಶಿಗರ ಕೈಯಲ್ಲಿದ್ದ ಬಸ್ರೂರನ್ನು ಛತ್ರಪತಿ ಶಿವಾಜಿ ಮಹಾರಾಜರು ಬಂಧಮುಕ್ತಿಗೊಳಿಸಿ, 1665ರ ಫೆ.13ರಂದು ಸ್ವಾತಂತ್ರ್ಯ ನೀಡಿದ್ದಾರೆ. ಈ ಪ್ರಯುಕ್ತ ಬೈಕ್ ರ್ಯಾಲಿಯನ್ನು ಹಮ್ಮಿ ಕೊಳ್ಳಲಾಗಿದೆ ಎಂದರು.
ಬಸ್ರೂರಿನಲ್ಲಿ ನಿರ್ಮಿಸಲಾದ ಆರು ಅಡಿ ಎತ್ತರದ ಶಿವಾಜಿ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು. ಸಂಜೆ 5.30ಕ್ಕೆ ಬಸ್ರೂರು ಕಾಲೇಜು ಮೈದಾನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ., ಬಸ್ರೂರು ದೇವಳದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲಿರುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಬ್ರಿಗೇಡ್ ಮುಖಂಡ ಚಂದ್ರಶೇಖರ್ ಹಾಜರಿದ್ದರು.