ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನ

Update: 2021-02-25 05:27 GMT

 ಉಡುಪಿ, ಫೆ.15: ಮೂಢನಂಬಿಕೆಗಳನ್ನು ಬಿಟ್ಟು ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆಯನ್ನು ಪಡೆದರೆ ಬಾಲ್ಯದ ಕ್ಯಾನ್ಸರ್ ಕಾಯಿಲೆಯನ್ನು ಸಂಪೂರ್ಣ ಗುಣಮುಖಗೊಳಿಸಲು ಸಾಧ್ಯವಿದೆ ಎಂದು ಮಣಿಪಾಲ ಕೆಎಂಸಿಯ ಡೀ್ ಡಾ. ಶರತ್ ಕೆ.ರಾವ್ ಹೇಳಿದ್ದಾರೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ಮತ್ತು ರಕ್ತಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ ಆಚರಿಸಲಾದ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರತಿ ವರ್ಷ ಫೆ.15ನ್ನು ವಿಶ್ವದಾದ್ಯಂತ ಬಾಲ್ಯ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಕಾಯಿಲೆಯ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ ಸುಮಾರು ಮೂರು ಲಕ್ಷ ಮಕ್ಕಳು ಹೊಸದಾಗಿ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಭಾರತದಲ್ಲಿ ಇವರ ಸಂಖ್ಯೆ 40 ಸಾವಿರದಿಂದ 45 ಸಾವಿರದಷ್ಟು. ಸರಿಯಾದ ಸಮಯದಲ್ಲಿ ರೋಗ ಪತ್ತೆ ಹಚ್ಚಿ ಅದಕ್ಕೆ ಸರಿಯಾದ ಕೇಂದ್ರದಲ್ಲಿ ಚಿಕಿತ್ಸೆ ನೀಡಿದರೆ, ಮಕ್ಕಳ ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದರು.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇ. 80ರಿಂದ 90ರಷ್ಟು ಮಕ್ಕಳು ರೋಗದಿಂದ ಸಂಪೂರ್ಣವಾಗಿ ವಾಸಿಯಾಗುತಿದ್ದಾರೆ. ಆದರೆ ಭಾರತದಲ್ಲಿ ಇದರ ಪ್ರಮಾಣ ಶೇ.50ರ ಒಳಗಿದೆ. ಇದಕ್ಕೆ ಕಾರಣ ರೋಗಪತ್ತೆ ಹಚ್ಚುವಲ್ಲಿ ವಿಳಂಬ, ಮೂಢನಂಬಿಕೆ ಮತ್ತು ಸರಿಯಾಗಿ ಚಿಕಿತ್ಸೆ ನೀಡುವ ಕೇಂದ್ರಗಳ ಕೊರತೆ. ಯಾವುದೇ ಮಕ್ಕಳಿಗೆ ತೂಕ ಕಡಿಮೆಯಾಗವುದು, ಮಲಬದ್ಧತೆ, ಮೈಯಲ್ಲಿ ಗಂಟುಗಳು ಕಾಣಿಸುವುದು ಅಥವಾ ಊತ ಬರುವುದನ್ನು ನಿರ್ಲಕ್ಷಿಸಬಾರದು‘ ಎಂದು ಡಾ.ಶರತ್ ರಾವ್ ನುಡಿದರು.

ಈ ಸಂರ್ಭದಲ್ಲಿ ಮಾತನಾಡಿದ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ‘2021ರಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳ ಕ್ಯಾನ್ಸರ್‌ನ್ನು ಒಂದು ಪ್ರಮುಖ ರೋಗವೆಂದು ಗುರುತಿಸಿದೆ. ಮತ್ತು 2030ರ ಹೊತ್ತಿಗೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಶೇ.60ರಿಂದ 65ರಷ್ಟು ಮಂದಿಯನ್ನು ಗುಣಪಡಿಸುವ ಗುರಿಯನ್ನು ಇಟ್ಟುಕೊಂಡಿದೆ.’ ಎಂದು ತಿಳಿಸಿದರು.

ನರ್ಸಿಂಗ್ ಸೇವೆಗಳ ಮುಖ್ಯಸ್ಥರಾದ ಡಾ. ಶುಭ ಸೂರಿಯ, ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕ ಡಾ. ನವೀನ್ ಎಸ್ ಸಲಿನ್ಸ್ ಮತ್ತು ಮಕ್ಕಳ ಕ್ಯಾನ್ಸರ್ ಮತ್ತು ರಕ್ತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News