​ಗೇರು ಕೃಷಿ ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ: ಡಾ.ವೆಂಕಟೇಶ್

Update: 2021-02-15 16:15 GMT

ಬ್ರಹ್ಮಾವರ, ಫೆ.15: ಬಂಗಾರದ ಬೆಳೆಯಾದ ಗೇರನ್ನು ಬಂಜರು ಭೂಮಿಯಲ್ಲಿ ಬೆಳೆಸಿ ಮಧ್ಯಮ ವರ್ಗದ ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಬಹುದು ಎಂದು ಕೊಚ್ಚಿನ್ ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಸಹ ಸಂಶೋಧನಾ ನಿರ್ದೇಶಕ ಡಾ.ವೆಂಕಟೇಶ್ ಎನ್ ಹುಬ್ಬಳ್ಳಿ ಹೇಳಿದ್ದಾರೆ.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಕೃಷಿ ಡಿಪ್ಲೋಮ ಮಹಾವಿದ್ಯಾಲಯ, ಕೊಚ್ಚಿನ್ ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಹಾಗೂ ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ನಡೆದ ಗೇರು ಮೇಳ ಮತ್ತು ವಿಚಾರ ಸಂಕಿರಣವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.

ಗೇರು ಬೆಳೆಯಲ್ಲಿ ವಿಯೆಟ್ನಾಂ ನಂತರ ಸ್ಥಾನದಲ್ಲಿ ಭಾರತವಿದ್ದು, 19 ರಾಜ್ಯಗಳಲ್ಲಿ ಗೇರನ್ನು ಬೆಳೆಸಲಾಗುತ್ತಿದ್ದರೂ ಸೂಕ್ತ ಪೋಷಕಾಂಶದ ಕೊರತೆಯಿಂದ ಇಳುವರಿ ತೃಪ್ತಿಕರವಾಗಿಲ್ಲ. ಪ್ರತಿವರ್ಷ 8,800ಕೋಟಿ ಮೆಟ್ರಿಕ್ ಟನ್ ಗೇರನ್ನು ಆಮದು ಮಾಡಿಕೊಳ್ಳುತ್ತಿದ್ದು, 3900 ಕೋಟಿ ಮೆಟ್ರಿಕ್ ಟನ್ ಮಾತ್ರ ರಫ್ತು ಮಾಡಲಾಗುತ್ತಿದೆ. ಭಾರತದಲ್ಲಿ ಈ ಬೆಳೆಯ ಬಗ್ಗೆ ನಿರ್ಲಕ್ಷ ಮತ್ತು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡದೇ ಇರುವುದರಿಂದ ರೈತರು ಲಾಭ ಪಡೆುಲಾಗುತ್ತಿಲ್ಲ ಎಂದವರು ಹೇಳಿದರು.

ಇದಕ್ಕೂ ಮುನ್ನ ಮಂಗಳೂರು ಬಿಜೈಯ ರಾಜ್ಯ ಉತ್ಪಾದಕರ ಸಂಘದ ಅಧ್ಯಕ್ಷ ಸಂತೋಷ್ ಡಿಸಿಲ್ವ ವಸ್ತು ಪ್ರದರ್ಶನ ಉದ್ಘಾಟಿಸಿದರು. ಉಡುಪಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಿದರು.

ಸನ್ಮಾನ : ಪ್ರಗತಿಪರ ಗೇರು ಕೃಷಿಕರಾದ ಬಂಟಕಲ್ಲು ರಾಮಕೃಷ್ಣ ಶರ್ಮಾ, ಮಂದಾರ್ತಿಯ ಕೆ.ವಿನೋದ್ ರಾವ್, ಕೆಂಚನೂರಿನ ಚಂದ್ರಶೇಖರ್ ಉಡುಪ, ಪುತ್ತೂರಿನ ಶರತ್, ಹುಣ್ಸೆಮಕ್ಕಿಯ ಕಿಶೋರ್ ಶೆಟ್ಟಿ, ಶೇಡಿಮನೆಯ ಸುಬ್ರಹ್ಮಣ್ಯ ಇವರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿಯ ಸಂಶೋಧನಾ ನಿರ್ದೇಶಕ ಡಾ.ಎಂ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಗೇರು ಅಭಿವೃದ್ಧಿ ನಿರ್ದೇಶನಾಲಯದ ಡಾ.ಡಿ.ಸುಬ್ರಹ್ಮಣ್ಯನ್, ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರವಿರಾಜ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ.ರಂಗನಾಥ್, ಬ್ರಹ್ಮಾವರ ಕೃಷಿ ಕೇಂದ್ರದ ಹಿರಿಯ ಕ್ಷೇತ್ರಾಧೀಕ್ಷಕ ಡಾ.ಶಂಕರ್ ಎಂ ಉಪಸ್ಥಿತರಿದ್ದರು.

ಕೃಷಿ ಮತ್ತು ತೋಟಗಾರಿಕಾ ವಿವಿಯ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ್ ಸ್ವಾಗತಿಸಿದರು. ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ವಿ.ಸುಧೀರ್ ಕಾಮತ್ ವಂದಿಸಿದರು. ಪ್ರವೀಣ್ ಎಸ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News