ಮ್ಯಾನ್ಮಾರ್ ನಲ್ಲಿ ಮುಂದುವರಿದ ಪ್ರತಿಭಟನೆ: ಸೇನೆಯಿಂದ ದಮನ ಕಾರ್ಯಾಚರಣೆಗೆ ವ್ಯಾಪಕ ಸಿದ್ಧತೆ

Update: 2021-02-15 17:28 GMT

ಯಾಂಗನ್ (ಮ್ಯಾನ್ಮಾರ್), ಫೆ. 15: ಮ್ಯಾನ್ಮಾರ್‌ನಲ್ಲಿ ಸೇನಾ ಕ್ಷಿಪ್ರಕ್ರಾಂತಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಸೇನೆಯು ಬೃಹತ್ ದಮನ ಕಾರ್ಯಾಚರಣೆಯೊಂದನ್ನು ನಡೆಸಲು ಸಿದ್ಧವಾಗುತ್ತಿದೆ ಎಂಬ ಭೀತಿ ವ್ಯಾಪಕವಾಗಿ ಹರಡುತ್ತಿರುವಂತೆಯೇ, ಪ್ರತಿಭಟನಕಾರರು ಸೋಮವಾರ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ಎರಡು ವಾರಗಳ ಹಿಂದೆ ನಡೆದ ಸೇನಾ ಕ್ಷಿಪ್ರಕ್ರಾಂತಿಯ ವಿರುದ್ಧ ನಡೆಯುತ್ತಿರುವ ಬಂಡಾಯವನ್ನು ದಮನಿಸುವ ತನ್ನ ಪ್ರಯತ್ನಗಳನ್ನು ಸೇನೆಯು ನಿಧಾನವಾಗಿ ಹೆಚ್ಚಿಸುತ್ತಿದೆ.

ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿ ನಡೆಸಿದ ಮ್ಯಾನ್ಮಾರ್ ಸೇನೆಯು ದೇಶದ ಆಡಳಿತವನ್ನು ನಾಗರಿಕ ಸರಕಾರದಿಂದ ತನ್ನ ವಶಕ್ಕೆ ಪಡೆದುಕೊಂಡಿದೆ ಹಾಗೂ ದೇಶದ ನಾಯಕಿ ಆಂಗ್ ಸಾನ್ ಸೂ ಕಿ ಸೇರಿದಂತೆ ನೂರಾರು ನಾಗರಿಕ ನಾಯಕರನ್ನು ಬಂಧಿಸಿದೆ.

ಪ್ರತಿಭಟನೆಗಳನ್ನು ನಿಲ್ಲಿಸಲು ಜನರು ನಿರಾಕರಿಸುತ್ತಿರುವಂತೆಯೇ, ಸೇನಾ ನಾಯಕರು ಸೋಮವಾರ ಬೆಳಗ್ಗೆ ದೇಶಾದ್ಯಂತ ಇಂಟರ್‌ನೆಟ್ ಕಡಿತಗೊಳಿಸಿದರು ಹಾಗೂ ದೇಶಾದ್ಯಂತ ಸೇನೆಯ ಉಪಸ್ಥಿತಿಯನ್ನು ಹೆಚ್ಚಿಸಿದರು.

ದೇಶದ ಅತ್ಯಂತ ದೊಡ್ಡ ನಗರ ಹಾಗೂ ವಾಣಿಜ್ಯ ಕೇಂದ್ರ ಯಾಂಗನ್‌ನ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಸೈನಿಕರು ಕಂಡರು. ಸೆಂಟ್ರಲ್ ಬ್ಯಾಂಕ್ ಸಮೀಪ ಸೈನಿಕರನ್ನು ಒಯ್ಯುವ ವಾಹನಗಳು ಕಂಡುಬಂದವು.

ಆದರೆ, ಸೆಂಟ್ರಲ್ ಬ್ಯಾಂಕ್ ಸಮೀಪ ಹಾಗೂ ಇತರ ಸ್ಥಳಗಳಲ್ಲಿ ಸೋಮವಾರ ಬೆಳಗ್ಗೆ ಹೊಸದಾಗಿ ಪ್ರತಿಭಟನೆಗಳು ನಡೆದವು.

ಸೈನಿಕರಿಗೆ ತಡೆಯೊಡ್ಡಿದರೆ 20 ವರ್ಷ ಜೈಲು: ಪ್ರತಿಭಟನಕಾರರಿಗೆ ಸೇನೆ ಎಚ್ಚರಿಕೆ

ಸಶಸ್ತ್ರ ಪಡೆಗಳಿಗೆ ತಡೆಯೊಡ್ಡಿದರೆ ನೀವು 20 ವರ್ಷಗಳನ್ನು ಜೈಲಿನಲ್ಲಿ ಕಳೆಯಬಹುದಾಗಿದೆ ಎಂದು ಮ್ಯಾನ್ಮಾರ್ ಸೇನೆ ಕ್ಷಿಪ್ರಕ್ರಾಂತಿ ವಿರೋಧಿ ಪ್ರತಿಭಟನಕಾರರಿಗೆ ಎಚ್ಚರಿಸಿದೆ.

ಕ್ಷಿಪ್ರಕ್ರಾಂತಿಯ ನಾಯಕರ ವಿರುದ್ಧ ‘‘ದ್ವೇಷ ಅಥವಾ ತಿರಸ್ಕಾರ ಭಾವನೆ ಮೂಡುವಂತೆ ಮಾಡುವವರಿಗೂ’’ ಸುದೀರ್ಘ ಜೈಲುವಾಸ ಮತ್ತು ಭಾರೀ ದಂಡ ಕಾದಿದೆ ಎಂಬುದಾಗಿಯೂ ಅದು ಹೇಳಿದೆ.

ಹಲವು ನಗರಗಳ ಪ್ರಮುಖ ಬೀದಿಗಳಲ್ಲಿ ಸೇನಾ ವಾಹನಗಳು ಕಂಡುಬಂದಿರುವಂತೆಯೇ ಈ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಬಿಬಿಸಿ ಸೋಮವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News