ಮಂಗಳೂರಿನಲ್ಲಿ ಫುಟ್‌ಪಾತ್ ಅತಿಕ್ರಮಣದ ವಿರುದ್ಧ ಮತ್ತೆ ಟೈಗರ್ ಕಾರ್ಯಾಚರಣೆ
ಮಂಗಳೂರು, ಫೆ.16: ನಗರದ ಫುತ್‌ಪಾತ್‌ಗಳನ್ನು ಅತಿಕ್ರಮಿಸಿ ವ್ಯಾಪಾರ ಮಾಡುವವರನ್ನು ತೆರವುಗೊಳಿಸಲು ಮನಪಾ, ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕವಾದ ವಿಶೇಷ ತಂಡ ರಚಿಸಿ ನಗರದಲ್ಲಿ ಟೈಗರ್ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಲಾಗುವುದು ಎಂದು
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದ್ದಾರೆ. ನಗರದ ಟ್ರಾಫಿಕ್ ಸಮಸ್ಯೆಗಳ ಕುರಿತಂತೆ ಇಂದು ಮನಪಾ ಸಭಾಂಗಣದಲ್ಲಿ ಮೇಯರ್ ದಿವಾಕರ್ ಪಾಂಡೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಜನಪ್ರತಿನಿಧಿಗಳಿಂದ ಸಮಸ್ಯೆ ಹಾಗೂ ಪೊಲೀಸ್ ಡಿಸಿಪಿಯವರಿಂದ ಸಲಹೆ, ಸೂಚನೆಗಳನ್ನು ಪಡೆದ ಬಳಿಕ ಮಾತನಾಡುತ್ತಿದ್ದರು.
ಮಂಗಳೂರು ಹಾಗೂ ಸುರತ್ಕಲ್ ವಲಯಕ್ಕೆ ಪ್ರತ್ಯೇಕವಾಗಿ ತಂಡವನ್ನು ರಚಿಸಿ ಫುಟ್‌ಪಾತ್‌ನಲ್ಲಿ ಜನಸಾಮಾನ್ಯರಿಗೆ ಓಡಾಟಕ್ಕೆ ತೊಂದರೆಯಾಗುವ ಎಲ್ಲ ಕಡೆಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸಿ ಅಕ್ರಮ ವ್ಯಾಪಾರದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದೇ ವೇಳೆ ನಗರದಲ್ಲಿ ಪಾರ್ಕಿಂಗ್ ಹಾಗೂ ನೋ ಪಾರ್ಕಿಂಗ್ ಏರಿಯಾಗಳನ್ನು ಗುರುತಿಸಲು ತಕ್ಷಣ ಜಂಟಿ ಸರ್ವೆ ನಡೆಸಲಾಗುವುದು. ಈಗಿರುವ ನೋ ಪಾರ್ಕಿಂಗ್ ಪ್ರದೇಶಗಳನ್ನು ಮರು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.
ಕೊರೋನ ಬಳಿಕ ದ್ವಿಚಕ್ರ, ಕಾರು ಸಂಖ್ಯೆಯಲ್ಲಿ ಶೇ.20ರಷ್ಟು ಹೆಚ್ಚಳ!
ಕೊರೋನ ಬಳಿಕ ಗ್ರಾಮಾಂತರ ಪ್ರದೇಶಗಳಿಂದ ಹಿಡಿದು ನಗರಕ್ಕೆ ಬಸ್ಸುಗಳಲ್ಲಿ ಸಂಚರಿಸುವವರ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ದ್ವಿಚಕ್ರ ಹಾಗೂ ಕಾರುಗಳ ಖರೀದಿ ಸಂಖ್ಯೆ ಶೇ.20ರಷ್ಟು ಹೆಚ್ಚಳವಾಗಿದೆ. ಹಾಗಾಗಿ ಈಗಾಗಲೇ ವಾಹನ ಸಂಚಾರ ದಟ್ಟಣೆಯಾಗಿರುವ ನಗರದಲ್ಲಿ ಟ್ರಾಫಿಕ್ ನಿರ್ವಹಣೆ ಸಮಸ್ಯೆ ಒತ್ತಡ ಹೆಚ್ಚಿದೆ. ನಗರದಲ್ಲಿ ಹಳೆ ಬಸ್ ನಿಲ್ದಾಣ, ಸೆಂಟ್ರಲ್ ಮಾರುಕಟ್ಟೆ ವ್ಯಾಪಾರ, ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡಲ್ಲಿ ಸಾಕಷ್ಟು ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ. ಅತಿಕ್ರಮಣ ತೆರವು ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ. ಅದಕ್ಕಾಗಿ ನಮಗೆ ಮನಪಾದಿಂದ ಒಂದು ತಂಡ ಹಾಗೂ ವಾಹನ ವ್ಯವಸ್ಥೆ ಮಾಡಿಕೊಡಬೇಕು ಎಂದ ಅವರು ನೋ ಪಾರ್ಕಿಂಗ್ ಹಾಗೂ ಪಾರ್ಕಿಂಗ್ ವಲಯಗಳ ಬಗ್ಗೆ ಮನಪಾ ಹಾಗೂ ಪೊಲೀಸ್ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಡಿಸಿಪಿ ವಿನಯ್ ಗಾಂವ್ಕರ್ ಹೇಳಿದರು.
ವೀರನಗರ, ಫೈಸಲ್ ನಗರದ ಕಡೆಗೆ ಸಿಟಿ ಬಸ್ ಸರಿಯಾಗಿ ಸಂಚರಿಸದೆ ಜನರಿಗೆ ಕಷ್ಟವಾಗಿದೆ, ಬಸ್‌ಗಳು ಟ್ರಿಪ್ ಕಟ್ ಮಾಡುತ್ತಿವೆ ಎಂದು ಸದಸ್ಯರಾದ ಅಶ್ರಫ್, ಸುಧೀರ್ ಶೆಟ್ಟಿ ಕಣ್ಣೂರು ಆಕ್ಷೇಪಿಸಿದರು.
ಮನೋಹರ್ ಕದ್ರಿ ಮಾತನಾಡಿ, ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಎರಡು ಆಸ್ಪತ್ರೆಗಳಿವೆ, ಮೆಡಿಕಲ್ ಇವೆ, ಅಲ್ಲಿಗೆ ಬರುವವರು ಸಮಸ್ಯೆ ಇರುವವರಾಗಿರುತ್ತಾರೆ, ಅಲ್ಲಿ ಟೋಯಿಂಗ್ ಮಾಡುವಾಗ ಸ್ವಲ್ಪ ಅನುಕಂಪ ಇರಲಿ ಎಂದು ಹೇಳಿದರು.
ಅಂಬೇಡ್ಕರ್ ವೃತ್ತದಲ್ಲಿ ಪಾದಚಾರಿಗಳಿಗೆ ರಸ್ತೆ ದಾಟುವುದಕ್ಕೆ ಝೀಬ್ರಾ ಕ್ರಾಸ್ ಇಲ್ಲದೆ ಸಮಸ್ಯೆಯಾಗಿದೆ. ಇಲ್ಲಿ ಝೀಬ್ರಾ ಕ್ರಾಸ್ ಹಾಕಬೇಕು ಎಂದು ವಿನಯರಾಜ್ ಒತ್ತಾಯಿಸಿದರು. ಕೋಡಿಕ್ಕಲ್ ಕ್ರಾಸ್ ಅಪಾಯಕಾರಿ ಜಂಕ್ಷನ್ ಆಗಿ ಬದಲಾಗಿದೆ ಎಂದು ಅನಿಲ್ ಕುಮಾರ್ ಹೇಳಿದರೆ, ಜಿಎಚ್‌ಎಸ್ ರಸ್ತೆಯಲ್ಲಿ ಹಂಪ್ಸ್ ಬೇಕು ಹಾಗೂ ಬಂದರು ರಸ್ತೆಗಳಲ್ಲಿ ಲಾರಿಗಳು ಇಕ್ಕೆಲಗಳಲ್ಲೂ ನಿಂತು ಸಂಚಾರ ದಟ್ಟಣೆಯಾಗುತ್ತಿದೆ ಎಂದು ಪೂರ್ಣಿಮಾ ಆಕ್ಷೇಪಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಬಹುತೇಕ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿನ ಟ್ರಾಫಿಕ್ ಸಮಸ್ಯೆ ಕುರಿತಂತೆ ಸಭೆಯ ಗಮನಕ್ಕೆ ತಂದರು. ಉಪ ಮೇಯರ್ ಜಾನಕಿ ಯಾನೆ ವೇದಾವತಿ, ವಿಪಕ್ಷ ನಾಯಕ ಅಬ್ದುಲ್ ರವೂಫ್, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಶರತ್ ಕುಮಾರ್, ಕಿರಣ್ ಕೋಡಿಕಲ್, ಜಗದೀಶ್ ಶೆಟ್ಟಿ, ಜಂಟಿ ಆಯುಕ್ತ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಮುಲಾಜಿಲ್ಲದೆ ಕ್ರಮ ವಹಿಸಿ- ಜನಪ್ರತಿನಿಧಿಗಳು ಒತ್ತಡ ಹಾಕದಿರಿ
ಫುಟ್‌ಪಾತ್‌ಗಳ ಅತಿಕ್ರಮಣ ತೆರವಿಗೆ ಯಾವುದೇ ಮುಲಾಜಿಲ್ಲದೆ, ಪೊಲೀಸ್, ಕಂದಾಯ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸೇರಿ ಕಾರ್ಯಾಚರಣೆ ನಡೆಸಬೇಕು. ಬೀದಿ ವ್ಯಾಪಾರಸ್ಥರೆಂದರೆ ತಳ್ಳುಗಾಡಿ ಇಟ್ಟು ವ್ಯಾಪಾರ ನಡೆಸುವವರಿಗೆ ಮಾತ್ರ ಅವಕಾಶ ನೀಡಿರುವುದು. ಹಾಗಾಗಿ ಈ ವಿಷಯದಲ್ಲಿ ಜನಪ್ರತಿನಿಧಿಗಳು ಕೂಡಾ ಕಾರ್ಯಾಚರಣೆಗೆ ಯಾವುದೇ ಒತ್ತಡ ಹಾಕದೆ ಸಹಕರಿಸಬೇಕು. ಟ್ರಾಫಿಕ್ ಪೊಲೀಸರು ವಾಹನಗಳ ಕರ್ಕಶ ಹಾರ್ನ್, ಸೈಲೆನ್ಸರ್‌ಗಳ ಬಗ್ಗೆಯೂ ಕಠಿಣ ಕ್ರಮ ವಹಿಸಬೇಕು ಎಂದು ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.
ಟ್ರಾಫಿಕ್ ಇಂಜಿನಿಯರ್ ತಜ್ಞ ತಂಡ ಒದಗಿಸಿ: ಡಿಸಿಪಿ ವಿನಯ್ ಗಾಂವ್ಕರ್ ಬೇಡಿಕೆ
ಸ್ಮಾರ್ಟ್ ಸಿಟಿಯ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟನೆ, ಪಾರ್ಕಿಂಗ್ ಹಾಗೂ ನೋ ಪಾರ್ಕಿಂಗ್ ಪ್ರದೇಶಗಳನ್ನು ಸಮರ್ಪಕವಾಗಿ ನಿಗದಿಪಡಿಸುವುದು, ರಸ್ತೆಗಳ ವಿಸ್ತರಣೆ ಸಂದರ್ಭ ಅವೈಜ್ಞಾನಿಕ ತಿರುವುಗಳಿಂದ ಮುಕ್ತಿ ಮೊದಲಾದ ಸಮಸ್ಯೆಗಳನ್ನು ಪರಿಹರಿಸಲು ಮಂಗಳೂರು ನಗರಕ್ಕೆ ಟ್ರಾಫಿಕ್ ಇಂಜಿನಿಯರಿಂಗ್ ತಜ್ಞ ತಂಡ ಅತೀ ಅಗತ್ಯವಿದೆ ಎಂದು ಮಂಗಳೂರು ಡಿಸಿಪಿ (ಅಪರಾಧ ಮತ್ತು ಸಂಚಾರ) ವಿನಯ್ ಗಾಂವ್ಕರ್ ಸಲಹೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಈಗಾಗಲೇ ಇಂತಹ ತಂಡ ಕಾರ್ಯಾಚರಿಸುತ್ತಿದೆ. ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆ ಸಂದರ್ಭ ಪೊಲೀಸ್ ಇಲಾಖೆಯಿಂದ ಈ ಬಗ್ಗೆ ಯಾವುದೇ ಯೋಜನಾ ವರದಿಯನ್ನು ಕೇಳಿಲ್ಲ. ಹಾಗಿದ್ದರೂ ಈ ಬಗ್ಗೆ ತಾನು ವರದಿ ನೀಡಿದ್ದೇನೆ ಎಂದವರು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಅಕ್ಷಯ್ ಶ್ರೀಧರ್, ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತಿಳಿಸಿ ಕ್ರಮ ವಹಿಸಲಾಗುವುದು ಎಂದರು.
ಪ್ರತಿಧ್ವನಿಸಿದ ಟೋಯಿಂಗ್ ಸಮಸ್ಯೆ
ಸಭೆಯಲ್ಲಿ ಟೋಯಿಂಗ್ ಸಮಸ್ಯೆ ಕುರಿತಂತೆಯೂ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಟೋಯಿಂಗ್ ಸಮಸ್ಯೆ ಬಗ್ಗೆ ಮಾತನಾಡಿದ ಪ್ರವೀಣ್ ಚಂದ್ರ ಆಳ್ವ, ನಗರದಲ್ಲಿ ನಡೆಯುತ್ತಿರುವ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕನಿಷ್ಠ ಮೂರು ತಿಂಗಳಾದರೂ ಟೋಯಿಂಗ್ ನಿಲ್ಲಿಸುವಂತೆ ಈಗಾಗಲೇ ಮನಪಾಕ್ಕೆ ಮನವಿ ಸಲ್ಲಿಸಿದ್ದೇನೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ದ್ವಿಚಕ್ರ ವಾಹನವನ್ನು ಕಂಡಾಗ ಟೋಯಿಂಗ್ ವಾಹನದವರು ಹಸಿದ ಹುಲಿಯಂತೆ ಬರುತ್ತಾರೆ ಎಂದು ವಿನಯ್‌ರಾಜ್ ಹೇಳಿದರೆ, ಟೋವಿಂಗ್ ಮಾಡುವುದು ತಪ್ಪಲ್ಲ, ಆದರೆ ಅದರ ಸಿಬ್ಬಂದಿ ವರ್ತನೆ ಸರಿಯಿಲ್ಲ, ಜನರಲ್ಲಿ ಕೆಟ್ಟದಾಗಿ ಮಾತನಾಡುತ್ತಾರೆ, ಅದಕ್ಕೆ ಕಡಿವಾಣ ಹಾಕಬೇಕು, ವಾಹನ ಹೊತ್ತೊಯ್ಯುವಾಗ ಹಾನಿಯಾಗದಂತೆ ನೋಡಬೇಕು ಎಂದು ನವೀನ್ ಡಿಸೋಜ ಒತ್ತಾಯಿಸಿದರು.
ಮೇಯರ್ ದಿವಾಕರ ಪಾಂಡೇಶ್ವರ ಪ್ರತಿಕ್ರಿಯಿಸಿ, ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿದಂತೆ ಕಾಮಗಾರಿ ನಡೆಯುವಲ್ಲಿ ಟೋಯಿಂಗ್ ನಡೆಸದಂತೆ ಈಗಾಗಲೇ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದರು.