ಫೆ.18ರಂದು ನಮ್ಮ ಕುಡ್ಲ ಟಾಕೀಸ್ ಲಾಂಛನ ಬಿಡುಗಡೆ
ಮಂಗಳೂರು, ಫೆ.16: ನಮ್ಮ ಕುಡ್ಲ ಟಿವಿ ಚಾನೆಲ್‌ನ ಹೊಸ ಪರಿಕಲ್ಪನೆಯಾದ ‘ನಮ್ಮ ಕುಡ್ಲ ಟಾಕೀಸ್’ನ ಲಾಂಛನ ಬಿಡುಗಡೆ ಫೆ.18ರಂದು ಓಶಿಯನ್ ಪರ್ಲ್‌ನಲ್ಲಿ ಸಂಜೆ 3.30ಕ್ಕೆ ನಡೆಯಲಿದೆ. ಇದರ್ಲಿ ತುಳು ಸಿನಿಮಾ ರಂಗದ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮಲ್ನಾಡ್ ಇನ್ಫೋಟೆಕ್ ಲಿಮಿಟೆಡ್‌ನ ಸಿಇಒ ಹರೀಶ್ ಬಿ. ಕರ್ಕೇರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕೋವಿಡ್‌ನಿಂದಾಗಿ ಸಿನಿಮಾ ರಂಗ ಬಹಳಷ್ಟು ಕೊರಗಿದೆ. ಅದರಲ್ಲೂ ತುಳು ಸಿನಿಮಾ ರಂಗಕ್ಕಂತೂ ಸಾಕಷ್ಟು ಬಿಸಿ ತಟ್ಟಿದೆ. ಈ ನಿಟ್ಟಿನಲ್ಲಿ ತುಳು ಸಿನಿ ರಂಗಕ್ಕೆ ಸಹಾಯ ಮಾಡುವ ದೃಷ್ಟಿಯಿಂದ ನಮ್ಮ ಕುಡ್ಲ ಟಾಕೀಸ್‌ನ್ನು ಆರಂಭ ಮಾಡುತ್ತಿದ್ದೇವೆ. ನಮ್ಮ ಕುಡ್ಲ ಟಾಕೀಸ್‌ನಲ್ಲಿ ತುಳುವಿನ ಹೊಸ ಚಿತ್ರಗಳನ್ನು ಒಂದು ತಿಂಗಳ ಕಾಲ ಪ್ರಸಾರ ಮಾಡಲಾಗುತ್ತದೆ. ಈ ಸಮಯದಲ್ಲಿ ಚಿತ್ರ ನಿರ್ಮಾಪಕರು ಈ ಚಿತ್ರವನ್ನು ಸಿನಿಮಾ ಮಂದಿರದಲ್ಲಿ ಹಾಕಬಾರದು. ಒಂದು ತಿಂಗಳ ಬಳಿಕ ಇದನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸಲು ಅವಕಾಶವಿದೆ. ಇದರ ಜತೆಯಲ್ಲಿ ಕುಡ್ಲ ಟಾಕೀಸ್ ಹಾಕಿದ ಬಳಿಕ ಒಂದು ಪ್ರೀಮಿಯರ್ ಶೋ ಮಾಡುವ ಅವಕಾಶವನ್ನು ಚಿತ್ರ ತಂಡಕ್ಕೆ ಮಾಡಲಾಗುತ್ತದೆ. ಚಿತ್ರದ ಪ್ರತಿಯಾಗಿ ನಮ್ಮ ಕುಡ್ಲ ಟಾಕೀಸ್‌ನಿಂದ ನಿರ್ಮಾಪಕರಿಗೆ ಗೌರವಧನವನ್ನು ನೀಡಲಾಗುತ್ತದೆ. ಒಂದು ತಿಂಗಳ ಪ್ರತಿ ರವಿವಾರ ಈ ಚಿತ್ರವನ್ನು ಮೂರು ಬಾರಿ ಪ್ರದರ್ಶನ ಎಂದರೆ ತಿಂಗಳಿಗೆ 12 ಪ್ರದರ್ಶನವನ್ನು ನೀಡಲಾಗುತ್ತದೆ ಎಂದರು.
ನಮ್ಮ ಕುಡ್ಲ ಟಾಕೀಸ್‌ನ ಸಿಒಒ ಕದ್ರಿ ನವನೀತ್ ಶೆಟ್ಟಿ ಮಾತನಾಡಿ, ನಮ್ಮ ಕುಡ್ಲ ಟಾಕೀಸ್ ಎಂದರೆ ಮನೆಯಲ್ಲೇ ಸಿನಿಮಾ ಥಿಯೇಟರ್ ಕಲ್ಪನೆಯಲ್ಲಿ ಸಿನಿಮಾ ನೋಡುವುದು. ಪ್ರೇಕ್ಷಕರು ಇದಕ್ಕೆ ಪ್ರತಿಯಾಗಿ ಕೇಬಲ್‌ಗೆ 120 ರೂ. ನೀಡಬೇಕು ಎಚ್‌ಡಿ ಚಾನೆಲ್ ಆದರೆ 160 ರೂ. ನೀಡಬೇಕು. ಮನೆಯಲ್ಲಿ ಟಿವಿಯಲ್ಲೇ ಕುಟುಂಬ ಸಮೇತರಾಗಿ ಸಣ್ಣ ಮೊತ್ತಕ್ಕೆ ತುಳು ಸಿನಿಮಾ ವೀಕ್ಷಣೆ ಮಾಡಬಹುದು ಎಂದರು.
2021ರ ಫೆ.19ರಂದು ತುಳು ಚಿತ್ರರಂಗ 50 ವರ್ಷ ಪೂರೈಸಲಿದೆ. ಈ ಸಂದರ್ಭದಲ್ಲಿ ನಮ್ಮ ಕುಡ್ಲ ಟಾಕೀಸ್ ಅಸ್ತಿತ್ವಕ್ಕೆ ಬರುತ್ತಿರುವುದು, ಸಿನಿಮಾ ನಿರ್ಮಾಪಕರಿಗೆ ಇದರಿಂದ ಪ್ರಯೋಜನವಾಗಲಿದೆ. ಈಗಾಗಲೇ ಅಬತರ ತುಳು ಸಿನಿಮಾದ ಜತೆಗೆ ದೇವದಾಸ್ ಕಾಪಿಕಾಡ್‌ರ ಮೂರು ಚಿತ್ರಗಳು ಈ ಟಾಕೀಸ್‌ನಲ್ಲಿ ಪ್ರದರ್ಶನ ಕಾಣಲಿದೆ ಎಂದು ನಮ್ಮ ಕುಡ್ಲ ಟಾಕೀಸ್‌ನ ಗೌರವ ನಿರ್ದೇಶಕ ಅರ್ಜುನ್ ಕಾಪಿಕಾಡ್ ಹೇಳಿದರು.
ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ .ಕರ್ಕೇರ ಮಾತನಾಡಿ, ದ.ಕ ಹಾಗೂ ಉಡುಪಿಯ ವಿ4 ಹಾಗೂ ಮಲ್ನಾಡ್ ಇನ್ಫೋಟೆಕ್ ವ್ಯಾಪ್ತಿಯಲ್ಲಿರುವ ಕೇಬಲ್ ಬಳಕೆದಾರರಿಗೆ ನಮ್ಮ ಕುಡ್ಲ ಟಾಕೀಸ್ ಚಾನೆಲ್ ಪಡೆದುಕೊಳ್ಳುವ ಅವಕಾಶ ಇದೆ. ಈಗಾಗಲೇ ಟಾಕೀಸ್‌ನಲ್ಲಿ ಪ್ರಸಾರವಾಗುವ ಚಿತ್ರಗಳ ಪೈರೆಸಿ ಮಾಡುವವರ ಕುರಿತು ಕೂಡ ಚಾನೆಲ್‌ನಲ್ಲಿ ಕ್ರಮದ ಕುರಿತು ಚಿಂತನೆ ನಡೆಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಈ ಸಂದರ್ಭ ವಿ4 ಮಿಡಿಯಾ ಎಂಎಸ್‌ಒನ ರಣದೀಪ್ ಕಾಂಚನ್, ಪಿಆರ್‌ಒ ಜಗನ್ನಾಥ್ ಶೆಟ್ಟಿ ಬಾಳ ಉಪಸ್ಥಿತರಿದ್ದರು.