ಬೆಳ್ತಂಗಡಿ: ಗುಡ್ಡ ಕುಸಿತದಿಂದ ಮಣ್ಣಿನಡಿ ಸಿಲುಕಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ
ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ.25ರಂದು ಗುಡ್ಡ ಕುಸಿತದಿಂದ ಮಣ್ಣಿನಡಿ ಕಣ್ಮರೆಯಾಗಿದ್ದ ವಿದ್ಯಾರ್ಥಿ ಲಾಯಿಲ ಗ್ರಾಮದ ಕಾಶಿಬೆಟ್ಟು ವಾಸುದೇವ ಶೆಟ್ಟಿ ಅವರ ಪುತ್ರ ಸನತ್ ಶೆಟ್ಟಿ(20) ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಕಳೆದ ಜನವರಿ 25 ರಂದು ಜಲಪಾತದ ವೀಕ್ಷಣೆಗೆ ಗೆಳೆಯರೊಂದಿಗೆ ತೆರಳಿ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಸಂಭವಿಸಿದ ಭೂ ಕುಸಿತದಲ್ಲಿ ಸನತ್ ಶೆಟ್ಟಿ ಮಣ್ಣಿನ ಅಡಿಗೆ ಸಿಲುಕಿದ್ದರು. ಭೂ ಕುಸಿತಕ್ಕೊಳಗಾಗಿದ್ದ ಪ್ರದೇಶದಲ್ಲಿ ಹಲವು ಲೋಡುಗಳಷ್ಟು ಮಣ್ಣು ಹಾಗೂ ಬೃಹತ್ ಗಾತ್ರದ ಬಂಡೆ ಕಲ್ಲುಗಳು ಉರುಳಿ ಬಂದಿದ್ದುದರಿಂದ ಹಾಗೂ ಕಾರ್ಯಾಚರಣೆಗೆ ತೊಡಕು ಉಂಟಾದ ಮಧ್ಯೆಯೂ ನಿರಂತರ ನಡೆದ ಪ್ರಯತ್ನದಿಂದ ಇಂದು ಮೃತದೇಹ ಪತ್ತೆಯಾಗಿದೆ.
23 ದಿನಗಳ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆ:
ಜನವರಿ 25 ರಂದು ಭೂ ಕುಸಿತ ಸಂಭವಿಸಿದ ದಿನದಿಂದ ಅಲ್ಲಿ ಸ್ಥಳೀಯರ ಹಾಗೂ ಸರಕಾರದ ವಿವಿಧ ಇಲಾಖೆಗಳ ನೇತೃತ್ವದಲ್ಲಿ ನಿರಂತರ ರಕ್ಷಣಾ ಕಾರ್ಯ ನಡೆದಿತ್ತು. ಘಟನಾ ಸ್ಥಳದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಗ್ರಾ.ಪಂ, ಎನ್‌ಡಿಆರ್‌ಎಫ್ ತಂಡ, ಮಹೇಶ್ ಶೆಟ್ಟಿ ತಿಮರೋಡಿ ಅವರ ನೇತೃತ್ವದ ತಂಡ ಹಾಗೂ ಸ್ಥಳೀಯರು ನಿರಂತರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಶಾಸಕ ಹರೀಶ್ ಪೂಂಜ ಸಹಕಾರ ನೀಡಿದ್ದರು. ಆರಂಭದಲ್ಲಿ ಯಾವುದೇ ಯಂತ್ರೋಪಕರಣಗಳ ಸಹಾಯವಿಲ್ಲದೆ ಜನರೇ ರಕ್ಷಣಾ ಕಾರ್ಯ ಆರಂಭಿಸಿದ್ದರು. ಬಳಿಕ ಕಂಪ್ರಶರ್ ಸಹಾಯದಿಂದ ಬೃಹತ್ ಬಂಡೆಗಳನ್ನು ಒಡೆಯುವ ಕಾರ್ಯ ಮಾಡಿದರು. ಅದರಲ್ಲಿಯೂ ಭಾರೀ ಪ್ರಮಾಣದ ಮಣ್ಣು ತೆರವು ಮಾಡುವುದು ಅಸಾಧ್ಯವಾದಾಗ ಬಳಿಕ ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಿ ಜೆಸಿಬಿ ತಂದು ಅದರ ಸಹಾಯದಿಂದ ಮಣ್ಣನ್ನು ತೆರವುಗೊಳಿಸಲಾಯುತು.
ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್, ತಹಶಿಲ್ದಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ವಸಂತ ಬಂಗೇರ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದರು. ಕಾರ್ಯಾಚರಣೆ ಅಸಾಧ್ಯವೆಂಬ ವಾತಾವರಣವಿದ್ದಾಗಲೂ ಯುವಕರ ತಂಡವೇ ಮುಂದೆ ನಿಂತು ಹುಡುಕಾಟ ನಡೆಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸ್ಥಳಕ್ಕೆ ವೈದ್ಯಕೀಯ ತಂಡ ಹಾಗೂ ಪೋಲೀಸ್ ಅಧಿಕಾರಿಗಳು ತೆರಳಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಿ ಅಂತಿಮ ಸಂಸ್ಕಾರ ನೆರವೇರಿಸಲು ಸಿದ್ದತೆ ನಡೆದಿದೆ.