×
Ad

ಜೆಎನ್‌ಯು ದೇಶದ್ರೋಹ ಪ್ರಕರಣ: ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಇತರರಿಗೆ ಸಮನ್ಸ್

Update: 2021-02-16 21:08 IST

ಹೊಸದಿಲ್ಲಿ, ಫೆ. 16: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಉಮರ್ ಖಾಲಿದ್, ಅನಿರ್ಭನ್ ಭಟ್ಟಾಚಾರ್ಯ ಹಾಗೂ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ನಾಯಕ ಕನ್ಹಯ್ಯ ಕುಮಾರ್ ಸೇರಿದಂತೆ 10 ಮಂದಿ ಆರೋಪಿಗಳ ವಿರುದ್ಧ ದಿಲ್ಲಿ ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯನ್ನು ದಿಲ್ಲಿ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.

ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಂಡ ಬಳಿಕ ಮುಖ್ಯ ಮೆಟ್ರೋಪಾಲಿಟಿನ್ ದಂಡಾಧಿಕಾರಿ (ಸಿಎಂಎಂ) ಪಂಕಜ್ ಶರ್ಮಾ ಮಾರ್ಚ್ 15ರ ಆರೋಪ ಪಟ್ಟಿಯಲ್ಲಿರುವ ಎಲ್ಲ ಆರೋಪಿಗಳಿಗೆ ಸೋಮವಾರ ಸಮನ್ಸ್ ಜಾರಿ ಮಾಡಿದ್ದಾರೆ. 2016ರ ಜೆಎನ್‌ಯು ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಕನ್ಹಯ್ಯ ಕುಮಾರ್ ಹಾಗೂ ಇತರ 9 ಮಂದಿಯ ವಿರುದ್ಧ ಒಂದು ವರ್ಷಗಳ ಬಳಿಕ ದಿಲ್ಲಿ ಪೊಲೀಸರು ಕಾನೂನು ಕ್ರಮಕ್ಕೆ ಅನುಮತಿ ಸ್ವೀಕರಿಸಿದ್ದರು.

ಸಂಸತ್ ದಾಳಿಯ ಆರೋಪಿ ಅಪ್ಝಲ್ ಗುರುವನ್ನು ನೇಣಿಗೆ ಹಾಕಿದ ದಿನದ ನೆನಪಿಗೆ 2016 ಫೆಬ್ರವರಿ 9ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಮೆರವಣಿಗೆಯ ಸಂದರ್ಭ ಜೆಎನ್‌ಯು ವಿದ್ಯಾರ್ಥಿ ನಾಯಕನಾಗಿದ್ದ ಕನ್ಹಯ್ಯ ಕುಮಾರ್ ಹಾಗೂ ಜೆಎನ್‌ಯುನ ಮಾಜಿ ವಿದ್ಯಾರ್ಥಿಗಳಾಗಿದ್ದ ಉಮರ್ ಖಾಲಿದ್, ಅನಿರ್ಭನ್ ಭಟ್ಟಾಚಾರ್ಯ ಅವರನ್ನೊಳಗೊಂಡ ಇತರರು ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂದು 2019ರ ಜನವರಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ದಿಲ್ಲಿ ಪೊಲೀಸರು ಹೇಳಿದ್ದರು. ಸಂಬಂಧಿತ ಇಲಾಖೆಯಿಂದ ಅನುಮತಿ ಬಾಕಿ ಇದ್ದುದರಿಂದ ಈ ಹಿಂದೆ ಪ್ರಕರಣವನ್ನು ಹಲವು ಬಾರಿ ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News