ಫೆ.20: ದ.ಕ. ಜಿಲ್ಲಾಧಿಕಾರಿಯಿಂದ ಗ್ರಾಮ ವಾಸ್ತವ್ಯ
Update: 2021-02-16 21:33 IST
ಮಂಗಳೂರು, ಫೆ.16: ದ.ಕ. ಜಿಲ್ಲೆಯ ಜನತೆಯ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಬಗೆಹರಿಸಲು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ನಿರ್ಧರಿಸಿದ್ದಾರೆ.
ಇದೇ ಫೆ.20ರಂದು ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಶಿಶಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಜಿಲ್ಲಾಧಿಕಾರಿ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬೆಳ್ತಂಗಡಿ ತಾಲೂಕು ಕಚೇರಿಯಿಂದ ಪಡೆದುಕೊಳ್ಳಬಹುದಾಗಿದೆ.
ಕಂದಾಯಾಧಿಕಾರಿಗಳಿಗೆ ಗ್ರಾಮ ವಾಸ್ತವ್ಯ ಕಡ್ಡಾಯ: ಸರಕಾರದ ಜನಪರ ಯೋಜನೆಗಳನ್ನು ತಳಮಟ್ಟದಲ್ಲಿ ಜನಸಾಮಾನ್ಯರಿಗೆ ನೇರವಾಗಿ ಒದಗಿಸಬೇಕೆಂಬ ಸರಕಾರದ ಆಶಯದಂತೆ ಜಿಲ್ಲೆಯ ಎಲ್ಲ ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆದಷ್ಟು ಸ್ಥಳದಲ್ಲೇ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.