×
Ad

ಪೊಲೀಸ್ ಕೇಸ್ ಹೆದರಿ ಹೋರಾಟದಿಂದ ಹಿಂದೆ ಹೆಜ್ಜೆ ಇಡಲ್ಲ: ಸಂತೋಷ್ ಬಜಾಲ್

Update: 2021-02-16 22:02 IST

ಮಂಗಳೂರು, ಫೆ.16: ಕೇಂದ್ರದ ನರೇಂದ್ರ ಮೋದಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿದರೆ ಪೊಲೀಸ್ ಕೇಸು ಹಾಕಿ ಹೆದರಿಸುವ ಪರಿಪಾಠ ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳಿಗೆ ಹೆದರಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.

‘ರೈತ ಹೋರಾಟ ಬೆಂಬಲಿಸಿ ಸಿದ್ಧಪಡಿಸಿದ್ದ ಟೂಲ್ ಕಿಟ್ ಎಡಿಟ್ ಮಾಡಿದ್ದಾಳೆ’ ಎಂದು ಆರೋಪಿಸಿ ದೆಹಲಿ ಪೊಲೀಸರು ಬಂಧಿಸಿದ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನವನ್ನು ಖಂಡಿಸಿ ಡಿವೈಎಫ್‌ಐ ಹಾಗೂ ಎಸ್‌ಎಫ್‌ಐ ಸಂಘಟನೆಗಳು ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರ ಸರ್ವಾಧಿಕಾರಿ ನೀತಿ ಅನುಸರಿಸುತ್ತಿದೆ. ಕನ್ನಯ್ಯ ಕುಮಾರ್ ಅವರಿಂದ ಹಿಡಿದು ದಿಶಾ ರವಿ ವರೆಗೆ ಈ ಸರಕಾರ ಪೊಲೀಸರನ್ನು ಬಳಸಿಕೊಂಡು ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿದೆ. ಅನೇಕ ಬುದ್ಧಿಜೀವಿಗಳು, ವಿದ್ಯಾರ್ಥಿಗಳು, ವಿದ್ವಾಂಸರನ್ನು ಜೈಲಿಗಟ್ಟಿದೆ. ಸರಕಾರದ ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಡಪಂಥೀಯ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಹೋರಾಡಿ, ದೇಶದ ಸಂವಿಧಾವನ್ನು ರಕ್ಷಿಸಲಿದ್ದೇವೆ ಎಂದರು.

ಡಿವೈಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆ.ಸಿ. ರೋಡ್ ಮಾತನಾಡಿ, ರಾಜ್ಯ ಗೃಹ ಇಲಾಖೆಯ ಅಥವಾ ಸ್ಥಳೀಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರದೇ ಒಕ್ಕೂಟ ವ್ಯವಸ್ಥೆಯ ಎಲ್ಲ ಪದ್ಧತಿಗಳಿಗೆ ತಿಲಾಂಜಲಿ ನೀಡಿ ಪರಿಸರ ಹೋರಾಗಾರ್ತಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಇದೊಂದು ರಾಜ್ಯದ ಪೊಲೀಸ್ ಇಲಾಖೆಗೆ ಅವಮಾನವಾಗಿದೆ. ಇದರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಿದ್ದ ಗೃಹ ಸಚಿವರು ಮೋದಿಯ ಮುಂದೆ ಮೂಗನಂತಾಗಿದ್ದಾರೆ ಎಂದರು.

ಸರಕಾರ ಕೂಡಲೇ ದಿಶಾ ರವಿಯನ್ನು ಬಿಡುಗಡೆ ಮಾಡಬೇಕು ಮತ್ತು ದೇಶ ವಿರೋಧಿ ಕೃಷಿ ಕಾಯ್ದೆಯನ್ನು ವಾಪಸ್ ಪಡೆದು ದೇಶದ ರೈತರ ಹಿತಕಾಯಲು ಮುಂದಾಗಬೇಕೆಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ, ಜಿಲ್ಲಾ ನಾಯಕ ನೌಷಾದ್ ಬೆಂಗ್ರೆ, ಸುನಿಲ್ ತೇವುಲ, ವರಪ್ರಸಾದ್ ಬಜಾಲ್, ಮಹಿಳಾ ಹೋರಾಟಗಾರ್ತಿ ಪ್ರಮೀಳಾ ದೇವಾಡಿಗ, ಅಸುಂತಾ ಡಿಸೋಜ, ಎಸ್‌ಎಫ್‌ಐನ ವಿನೀತ್ ದೇವಾಡಿಗ, ಸಿನಾನ್ ಬೆಂಗ್ರೆ, ತಿಲಕ್ ಕುತ್ತಾರ್, ಸಾಮಾಜಿಕ ಕಾರ್ಯಕರ್ತ ಆಲ್ವಿನ್ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News