ಮಂಗಳೂರು: ನೈಸರ್ಗಿಕ ಅನಿಲ ವಿತರಣೆ ಬಂಕ್ ಕಾರ್ಯಾರಂಭ

Update: 2021-02-16 16:48 GMT

ಮಂಗಳೂರು, ಫೆ.16: ಕರಾವಳಿಯ ಮೊದಲ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ವಿತರಣೆ ಬಂಕ್ ಮಂಗಳವಾರದಿಂದ ಮಂಗಳೂರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ.

ಗೈಲ್ ಗ್ಯಾಸ್ ಲಿ.ವತಿಯಿಂದ ವಾಹನಗಳಿಗೆ ಪೂರೈಕೆ ಉದ್ದೇಶದಿಂದ ಸಿಎನ್‌ಜಿ ಸ್ಥಾವರಗಳು ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿದ್ದು, ಅದರಂತೆ ಮೊದಲ ಬಂಕ್ ನಗರ ಹೊರವಲಯದ ಅಡ್ಯಾರ್‌ಕಟ್ಟೆ ಬಳಿಯ ಇಂಡಿಯನ್ ಆಯಿಲ್‌ನ ನೇತ್ರಾವತಿ ಸರ್ವಿಸ್ ಸ್ಟೇಷನ್‌ನಲ್ಲಿ ಆರಂಭವಾಗಿದೆ.

ಇಂಡಿಯನ್ ಆಯಿಲ್ ಸಂಸ್ಥೆಯ ಚೀಫ್ ಡಿವಿಜನಲ್ ರಿಟೈಲ್ ಸೇಲ್ಸ್ ಮ್ಯಾನೇಜರ್ (ಸಿಡಿಆರ್‌ಎಸ್‌ಎಂ) ಅನೂಪ್ ಕುಶ್ವಾಹ್ ಬಂಕ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಮಂಗಳೂರು ಸ್ವಚ್ಛ ಹಸಿರು ನಗರ ಎಂದು ಪ್ರಸಿದ್ಧಿ ಪಡೆದಿದೆ. ಸಿಎನ್‌ಜಿ ಬಳಕೆ ಹಸಿರು ಪರಿಸರಕ್ಕೆ ಮತ್ತಷ್ಟು ಪೂರಕವಾಗಲಿದೆ. ವಾಯುಮಾಲಿನ್ಯ ಪ್ರಮಾಣವನ್ನೂ ಕಡಿಮೆಗೊಳಿಸಲಿದೆ. ಇತರ ಇಂಧನಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂದರು.

ಗೈಲ್ ಗ್ಯಾಸ್‌ನ ಚೀಫ್ ಜನರಲ್ ಮ್ಯಾನೇಜರ್ (ಸಿಜಿಡಿ ಪ್ರಾಜೆಕ್ಟ್ಸ್) ಕಪಿಲ್ ಕುಮಾರ್ ಜೈನ್, ಮಾರ್ಚ್ ಅಂತ್ಯದ ವೇಳೆಗೆ 10 ಸ್ಟೇಷನ್‌ಗಳು ಮಂಗಳೂರು ಮತ್ತು ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಲಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ 80-100 ಸ್ಟೇಷನ್‌ಗಳು ನಿರ್ಮಾಣ ಮಾಡಲಾಗುವುದು ಎಂದರು.

ಗೈಲ್ ಗ್ಯಾಸ್ ಡಿಜಿಎಂ ವಿಲೀನ್ ಝುಂಕೆ, ಇಂಡಿಯನ್ ಆಯಿಲ್ ಸೀನಿಯರ್ ಮ್ಯಾನೇಜರ್ ರೀಟೈಲ್ ಸೇಲ್ಸ್ ಸಿ.ಎನ್.ಶ್ರೀನಿವಾಸ್, ಅಸಿಸ್ಟೆಂಟ್ ಮ್ಯಾನೇಜರ್ ರೀಟೈಲ್ ಸೇಲ್ಸ್ ಪ್ರತಿಭಾ, ಬಂಕ್ ಮಾಲಕ ಬಾಬು ಉಪಸ್ಥಿತರಿದ್ದರು.

ಮಾಂಡೋವಿ ಮೋಟರ್ಸ್‌ ಸಹಾಯಕ ಮಾರಾಟ ಪ್ರಬಂಧಕ ಮುರಳೀಧರ್ ಬಿ.ಜೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

55 ರೂ.ಗೆ 1 ಕೆ.ಜಿ. ಸಿಎನ್‌ಜಿ

ಮೊದಲ ದಿನ ಸಿಎನ್‌ಜಿಗೆ 1 ಕೆ.ಜಿಗೆ 55 ರೂ. ದರವಿತ್ತು. ಮೊದಲ ಗ್ರಾಹಕ ಶಂಕರ ಭಟ್ ತಮ್ಮ ಕಾರಿಗೆ ಸಿಎನ್‌ಜಿ ಹಾಕಿಸುವ ಮೂಲಕ ಜಿಲ್ಲೆಯ ಮೊದಲ ಸಿಎನ್‌ಜಿ ಗ್ರಾಹಕ ಎಂದೆನಿಕೊಂಡರು. ಪ್ರಸ್ತುತ ಸುರತ್ಕಲ್‌ನ ಆಟೋ ಫ್ಯೂಯೆಲ್ ಸೊಲ್ಯೂಷನ್ಸ್ ಸಂಸ್ಥೆಯಲ್ಲಿ ಸಿಎನ್‌ಜಿ ಕನ್ವರ್ಟರ್ ಕಿಟ್‌ಗಳು ಲಭ್ಯವಿವೆ. ಬುಧವಾರ ಎರಡನೇ ಸಿಎನ್‌ಜಿ ಬಂಕ್ ಕಾವೂರಿನಲ್ಲಿ ಆರಂಭವಾಗಲಿದೆ. ಪ್ರಸ್ತುತ ಟ್ಯಾಂಕರ್ ಮೂಲಕ ಸಿಎನ್‌ಜಿ ಪೂರೈಸಲಾಗುವುದು, ಪೈಪ್‌ಲೈನ್ ಕೆಲಸ ಪೂರ್ಣಗೊಂಡ ಬಳಿಕ ಸಂಪರ್ಕ ನೀಡಲಾಗುವುದು ಎಂದು ವಿಲೀನ್ ಝುಂಕೆ ಮಾಹಿತಿ ನೀಡಿದರು.

*ಮಾರಾಟ ಸಂಸ್ಥೆ ಮಾಹಿತಿ ಕೇಂದ್ರ

ನಗರದಲ್ಲಿ ಸಿಎನ್‌ಜಿ ವಿತರಣೆ ಆರಂಭವಾಗಿರುವುದರಿಂದ ಕಾರು, ಆಟೋ ಮಾರಾಟ ಸಂಸ್ಥೆಗಳು ತಮ್ಮ ಮಾಹಿತಿ ಕೇಂದ್ರ ಮತ್ತು ಸಿಎನ್‌ಜಿ ವಾಹನಗಳ ಪ್ರದರ್ಶನ ಬಂಕ್‌ನಲ್ಲಿ ಆರಂಭಿಸಿದೆ. ನಗರದ ಮುಂಚೂಣಿ ಕಾರು ಮಾರಾಟ ಸಂಸ್ಥೆಗಳಾದ ಮಾಂಡೋವಿ ಮೋಟರ್ಸ್‌, ಭಾರತ್ ಆಟೋ ಕಾರ್ಸ್‌ ಮತ್ತು ಆಟೋ ಮಾರಾಟ ಸಂಸ್ಥೆ ಸುಪ್ರೀಂ ಬಜಾಜ್ ಮಾಹಿತಿ ಕೇಂದ್ರಗಳು ಬಂಕ್ ಆರಂಭಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News