ರೈತರ ಪ್ರತಿಭಟನೆ: ಬ್ರಿಟಷ್ ಸಂಸದೆಗೆ ಲಂಡನ್ ನ ಭಾರತೀಯ ರಾಯಭಾರ ಕಚೇರಿಯ ಬಹಿರಂಗ ಪತ್ರ

Update: 2021-02-16 17:34 GMT

ಲಂಡನ್,ಫೆ.16: ಭಾರತದಲ್ಲಿ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಬೆಂಬಲಿಸಿರುವ ಬ್ರಿಟಿಷ್ ಸಂಸದೆ (ಲೀಸಿಸ್ಟರ್ ಈಸ್ಟ್) ಕ್ಲಾಡಿಯಾ ವೆಬ್ಬೆ ಅವರಿಗೆ ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯು ಬಹಿರಂಗ ಪತ್ರವೊಂದನ್ನು ಬರೆದಿದೆ. ಕ್ಲಾಡಿಯಾ ಪ್ರತಿನಿಧಿಸುತ್ತಿರುವ ಸಮುದಾಯದ ಯಾವುದೇ ಆತಂಕಗಳನ್ನು ರಾಯಭಾರ ಕಚೇರಿಗೆ ತಿಳಿಸಲು ಸಂಸದೆಗೆ ಸ್ವಾಗತವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಭಾರತೀಯ ರೈತರ ಸಣ್ಣ ವರ್ಗವೊಂದು ವಿರೋಧಿಸುತ್ತಿರುವ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ನಿಮ್ಮ ಕ್ಷೇತ್ರದ ಮತದಾರರ ಕಳವಳಗಳನ್ನು ನಿವಾರಿಸಲು ಸಮಗ್ರವಾಗಿ ಮತ್ತು ವಿವರವಾಗಿ ಸ್ಪಷ್ಟನೆಗಳನ್ನು ನೀಡಲು ನಾವು ಸಿದ್ಧರಿದ್ದೇವೆ ’ಎಂದು ಪತ್ರದಲ್ಲಿ ಹೇಳಲಾಗಿದೆ.

ಇದಕ್ಕೂ ಮುನ್ನ ತಾನು ಭಾರತೀಯ ರೈತರೊಂದಿಗಿದ್ದೇನೆ ಎಂದು ಟ್ವೀಟಿಸಿದ್ದ ಕ್ಲಾಡಿಯಾ,ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್‌ಕಿಟ್ ಪ್ರಕರಣದಲ್ಲಿ ಬಂಧಿತರಾಗಿರುವ ಬೆಂಗಳೂರಿನ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರಿಗೂ ಬೆಂಬಲವನ್ನು ವ್ಯಕ್ತಪಡಿಸಿದ್ದರು.

‘ರೈತರ ಪ್ರತಿಭಟನೆಯನ್ನು ಶಾಂತಿಯುತವಾಗಿ ಪ್ರತಿಭಟಿಸಿದ್ದಕ್ಕಾಗಿ ವಿದ್ಯಾರ್ಥಿನಿ ಮತ್ತು ಹವಾಮಾನ ಕಾಯಕರ್ತೆ ದಿಶಾ ರವಿ(22) ಹಾಗೂ ಕಾರ್ಮಿಕ ಒಕ್ಕೂಟದ ಕಾರ್ಯಕರ್ತೆ ನವದೀಪ ಕೌರ್ (24) ಈ ಇಬ್ಬರೂ ಮಹಿಳೆಯರನ್ನು ಬಂಧಿಸಿ ಜೈಲಿಗೆ ತಳ್ಳಲಾಗಿದೆ. ಈ ದಬ್ಬಾಳಿಕೆಯ ಹಿಂದೆ ಸರ್ವಾಧಿಕಾರ ಮತ್ತು ಮುಕ್ತ ಮಾರುಕಟ್ಟೆ ಬಂಡವಾಳವಾದವಿದೆ. ಮೌನದಿಂದಿರಬೇಡಿ ’ಎಂದು ಕ್ಲಾಡಿಯಾ ಟ್ವೀಟಿಸಿದ್ದರು.

  ರೈತರನ್ನು ರಕ್ಷಿಸುವ ಮತ್ತು ಅವರನ್ನು ಸಬಲಗೊಳಿಸುವ ಉದ್ದೇಶದ ಕೃಷಿ ಕಾಯ್ದೆಗಳು ಕಳೆದ 20 ವರ್ಷಕ್ಕೂ ಹೆಚ್ಚು ಕಾಲದಿಂದ ಭಾರತದ ಕೃಷಿ ಕ್ಷೇತ್ರದಲ್ಲಿಯ ನಿರ್ದಿಷ್ಟ ಸವಾಲುಗಳನ್ನು ವಿಶ್ಲೇಷಿಸಿರುವ ತಜ್ಞರು ಮತ್ತು ಸಮಿತಿಗಳ ಶಿಫಾರಸುಗಳನ್ನು ಆಧರಿಸಿವೆ. ಕೃಷಿ ಕಾಯ್ದೆಗಳ ಬಗ್ಗೆ ಸಂಸತ್ತಿನಲ್ಲಿ ವಿವರವಾಗಿ ಚರ್ಚಿಸಲಾಗಿದೆ ಮತ್ತು ಇದರ ಲಾಭಗಳು ತಕ್ಷಣದಿಂದಲೇ 10 ಕೋಟಿಗೂ ಅಧಿಕ ಸಣ್ಣರೈತರಿಗೆ ತಲುಪಲಾರಂಭಿಸಿವೆ. ಈ ಕಾಯ್ದೆಗಳನ್ನು ರೂಪಿಸಿದಾಗಿನಿಂದ ಅವುಗಳ ಸಮರ್ಥ ಅನುಷ್ಠಾನಕ್ಕಾಗಿ ರೈತರು ಮತ್ತು ಇತರ ಪಾಲುದಾರರೊಂದಿಗೆ ಚರ್ಚೆಗಳನ್ನು ನಡೆಸಲಾಗಿದೆ. ರೈತರ ಒಂದು ವರ್ಗವು ಈ ಕಾಯ್ದೆಗಳ ಬಗ್ಗೆ ಆಕ್ಷೇಪವನ್ನು ಹೊಂದಿದ್ದು,11 ಸುತ್ತುಗಳ ಮಾತುಕತೆಗಳು ನಡೆದಿವೆ. ಭಾರತ ಸರಕಾರವು ಪ್ರತಿಭಟನಾನಿರತ ರೈತರ ಆತಂಕಗಳನ್ನು ನಿವಾರಿಸಲು ಕಾಯ್ದೆಗಳ ಅನುಷ್ಠಾನವನ್ನು ಒಂದೂವರೆ ವರ್ಷ ಮುಂದೂಡುವುದು ಸೇರಿದಂತೆ ಹಲವಾರು ಮಾರ್ಗಗಳನ್ನು ಸೂಚಿಸಿದೆಯಾದರೂ ಈ ಆಯ್ಕೆಗಳನ್ನು ಅವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ರಾಯಭಾರ ಕಚೇರಿಯು ಪತ್ರದಲ್ಲಿ ತಿಳಿಸಿದೆ.

ಕೃಷಿ ಸುಧಾರಣೆಗಳ ಉದ್ದೇಶ,ಪ್ರತಿಭಟನಾನಿರತ ರೈತ ಸಂಘಟನೆಗಳಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಎಲ್ಲ ಕಳವಳಗಳನ್ನು ನಿವಾರಿಸಲು ಸರಕಾರದ ಮುಕ್ತ ಮನಸ್ಸು ಇತ್ಯಾದಿಗಳ ಬಗ್ಗೆ ಯಾವುದೇ ತಪ್ಪುಗ್ರಹಿಕೆಗಳನ್ನು ನಿವಾರಿಸಲು ಈ ಮಾಹಿತಿಗಳನ್ನು ಕ್ಲಾಡಿಯಾರೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದಿರುವ ಪತ್ರವು,ಪ್ರಯತ್ನಗಳು ಮುಂದುವರಿಯಲಿವೆ,ಆದರೆ ಸುಳ್ಳುಮಾಹಿತಿಗಳು ಮತ್ತು ಪ್ರಚೋದಕ ಹೇಳಿಕೆಗಳ ಮೂಲಕ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಲು ವಿದೇಶಿ ಪಟ್ಟಭದ್ರ ಹಿತಾಸಕ್ತಿಗಳ ಪ್ರಯತ್ನಗಳ ಬಗ್ಗೆ ಸರಕಾರಕ್ಕೆ ಹೆಚ್ಚಿನ ಅರಿವು ಇದೆ. ಇಂತಹ ಪ್ರಯತ್ನಗಳು ಪ್ರತಿಭಟನಾಕಾರರು ಮತ್ತು ಸರಕಾರದ ನಡುವಿನ ಮಾತುಕತೆಗಳು ಮುಂದುವರಿಯಲು ಅಥವಾ ನಮ್ಮ ಜನರು ಸಾಂಪ್ರದಾಯಿಕವಾಗಿ ನಂಬಿಕೊಂಡು ಬಂದಿರುವ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೆರವಾಗುವುದಿಲ್ಲ ಎಂದು ಒತ್ತಿ ಹೇಳಿದೆ.

ವಿಶ್ವದ ಇತರೆಡೆಗಳಲ್ಲಿ ಇಂತಹ ಸ್ಥಿತಿಗೆ ಹೋಲಿಸಿದರೆ ಸರಕಾರ ಮತ್ತು ಭದ್ರತಾ ಪಡೆಗಳು ಪ್ರತಿಭಟನಾ ರ್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿರುವ ರೈತರನ್ನು ಅತ್ಯಂತ ಗೌರವ ಮತ್ತು ಸಹನೆಯಿಂದ ನೋಡಿಕೊಳ್ಳುತ್ತಿವೆ ಎಂದೂ ರಾಯಭಾರ ಕಚೇರಿಯು ತನ್ನ ಪತ್ರದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News