ಉಡುಪಿ: ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವಿಶೇಷ ಸಭೆ

Update: 2021-02-16 17:34 GMT

ಉಡುಪಿ, ಫೆ.16: ಹಿರಿಯರ ತ್ಯಾಗ, ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ಇಂದು ವಿಶ್ವದ ಅತೀ ದೊಡ್ಡ ಯಶಸ್ವಿ ರಾಜಕೀಯ ಪಕ್ಷವೆನಿಸಿದೆ. ರಾಜ್ಯದಿಂದ ಕಾಲ ಕಾಲಕ್ಕೆ ಬರುವ ನಿರ್ದೇಶನದಂತೆ ಪಕ್ಷದ ಸಂಘಟನಾತ್ಮಕ ವಿಚಾರಗಳನ್ನು ಮಂಡಲ, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳ ಮೂಲಕ ಕಟ್ಟ ಕಡೆಯ ಕಾರ್ಯಕರ್ತರಿಗೂ ತಲುಪಿಸುವ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ಅತ್ಯಂತ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಾಗ ಯಶಸ್ಸು ಖಚಿತ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಜಿಲ್ಲಾ ಮಹಿಳಾ ಮೋರ್ಚಾದ ಪ್ರಭಾರಿ ಭಾಗೀರಥಿ ಮುಳ್ಳೇರಿಯ ಹೇಳಿದ್ದಾರೆ.

ಮಂಗಳವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಗ್ರಾಪಂ ಮಟ್ಟದಿಂದ ಎಲ್ಲಾ ಸ್ತರಗಳ ಸಹಿತ ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರದ ವಿವಿಧ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸುವ ಗುರುತರವಾದ ಜವಾಬ್ದಾರಿ ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ಮೇಲಿದೆ. ಬಿಜೆಪಿ ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದೆ. ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿಯೂ ಬಿಜೆಪಿಯ ವಿಜಯ ಪತಾಕೆ ಹಾರಿಸಲು ಎಲ್ಲರ ಜೊತೆ ಮಹಿಳಾ ಮೋರ್ಚಾ ತಂಡವೂ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದವರು ಕರೆ ನೀಡಿದರು.

ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಮಾತನಾಡಿದರು. ವಿಶೇಷ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಹಾಗೂ ಮಂಡಲಗಳ ಮಹಿಳಾ ಮೋರ್ಚಾ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಜಿಲ್ಲಾ ಕಾರ್ಯದರ್ಶಿ ರೇಣುಕಾ ವಿ. ಸುವರ್ಣ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News