×
Ad

ಯು.ಟಿ. ಖಾದರ್‌ಗೆ ಸೋಲಿನ ಹತಾಶೆ: ಎಸ್‌ಡಿಪಿಐ ಆರೋಪ

Update: 2021-02-16 23:30 IST

ಮಂಗಳೂರು, ಫೆ.16: ಗ್ರಾಪಂ ಚುನಾವಣೆಯಲ್ಲಿ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಪಕ್ಷವು ನಿರೀಕ್ಷೆಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡು ಜಿಲ್ಲೆಯಲ್ಲಿ ಒಂದು ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಅರಗಿಸಿಕೊಳ್ಳಳಾಗದ ಸ್ಥಳೀಯ ಶಾಸಕ ಯು.ಟಿ ಖಾದರ್ ಎಸ್‌ಡಿಪಿಐ ಮೇಲೆ ನಿರಾಧಾರ ಆರೋಪ ಹೊರಿಸುತ್ತಿರುವುದು ಅವರ ಸೋಲಿನ ಹತಾಶ ಮನೋಭಾವವನ್ನು ತೋರಿಸುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತನ್ನ ಗೆಲುವಿಗೆ ಕಂಠಕವಾಗುವುದನ್ನು ಅರಿತ ಯು.ಟಿ. ಖಾದರ್ ಈ ರೀತಿಯ ಸುಳ್ಳಾರೋಪಗಳನ್ನು ಹಾಗೂ ಅಪಪ್ರಚಾರಗಳನ್ನು ನಡೆಸುತ್ತಿದ್ದಾರೆ.ಇಂತಹ ಅಪಪ್ರಚಾರಗಳು ಶಾಸಕರಿಗೆ ಶೋಭೆಯಲ್ಲ ಎಂದು ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ಬಾಸ್ ಕಿನ್ಯಾ ತಿಳಿಸಿದ್ದಾರೆ.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಡಿಪಿಐ ಪಕ್ಷವು ಸಜಿಪನಡು, ಪಾವೂರು ಗ್ರಾಪಂಗಳಲ್ಲಿ ಆಡಳಿತ ಪಡೆದುಕೊಂಡಿದೆ. ಅಲ್ಲದೆ ಹಲವು ಗ್ರಾಪಂಗಳಲ್ಲಿ ನಿರ್ಣಾಯಕ ಸ್ಥಾನದಲ್ಲಿದೆ. ಇದರಿಂದ ಹತಾಶರಾದ ಶಾಸಕರು ಅಪಪ್ರಚಾರ ನಡೆಸುತ್ತಿದ್ದಾರೆ. ಈ ರೀತಿಯ ಸುಳ್ಳಾರೋಪಗಳನ್ನು ಜಿಲ್ಲೆಯ ಜನತೆ ಈಗಾಗಲೇ ಅರ್ಥ ಮಾಡಿಕೊಂಡಿದ್ದಾರೆ. ಶಾಸಕರ ಅಪಪ್ರಚಾರದಿಂದ ಪಕ್ಷಕ್ಕೆ ಪುಕ್ಕಟೆ ಪ್ರಚಾರ ಸಿಕ್ಕಿದಂತಾಗಿದೆ ಎಂದು ಹೇಳಿಕಯಲ್ಲಿ ತಿಳಿಸಿದ್ದಾರೆ.

ಪಾವೂರಿನಲ್ಲಿ ಎಸ್‌ಡಿಪಿಐ 6, ಕಾಂಗ್ರೆಸ್ 5, ಬಿಜೆಪಿ ಮತ್ತು ಜೆಡಿಎಸ್ ತಲಾ 2 ಸ್ಥಾನಗಳನ್ನು ಪಡೆದಿದೆ. ಆರು ಸ್ಥಾನ ಪಡೆದಿದ್ದ ಎಸ್‌ಡಿಪಿಐಗೆ ಜೆಡಿಎಸ್ ಅಭ್ಯರ್ಥಿಗಳ ಎರಡು ಮತಗಳು ಹೆಚ್ಚುವರಿಯಾಗಿ ಸಿಕ್ಕಿದೆ. ಇದರಿಂದ ಎಸ್‌ಡಿಪಿಐ ಅಭ್ಯರ್ಥಿಗಳು ಪಾವೂರು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಸ್‌ಡಿಪಿಐಗೆ ಯಾವತ್ತೂ ಬಿಜೆಪಿಯ ಬೆಂಬಲ ಬೇಕಾಗಿಲ್ಲ. ಒಂದು ವೇಳೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಥಿತಿ ಪಕ್ಷಕ್ಕೆ ಇದ್ದಿದ್ದರೆ ಹಲವಾರು ಗ್ರಾಪಂಗಳಲ್ಲಿ ಅಧಿಕಾರವನ್ನು ಪಡೆಯಬಹುದಿತ್ತು. ಅಂತಹ ಯಾವುದೇ ಹೊಂದಾಣಿಕೆಗೆ ಎಸ್‌ಡಿಪಿಐ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಯಾವತ್ತೂ ರಾಜಕೀಯ ಮಾಡಿಲ್ಲ. ಇಂದು ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಸದಸ್ಯರು ಬಿಜೆಪಿಗೆ ಸೇರಿ ಅಧಿಕಾರ ನಡೆಸುತ್ತಿರುವುದು ಹಾಗೂ ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದ ಅಬ್ಬಾಸ್ ಕಿನ್ಯ, ಈ ಬಗ್ಗೆ ಯು.ಟಿ.ಖಾದರ್ ಬಹಿರಂಗ ಚರ್ಚೆಗೆ ಸನ್ನದ್ಧರಾಗಬೇಕು ಎಂದು ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News