×
Ad

​ರ್ಯಾಗಿಂಗ್ ಮುಕ್ತ ಅಭಿಯಾನಕ್ಕೆ ಎಸ್‌ಎಫ್‌ಐ ಮನವಿ

Update: 2021-02-16 23:31 IST

ಮಂಗಳೂರು, ಫೆ.16: ಜಿಲ್ಲೆಯ ಪ್ರತಿಷ್ಠಿತ ಕಾಲೇಜಿಗಳಲ್ಲಿ ರ್ಯಾಗಿಂಗ್ ಪ್ರಕರಣ ಬೆಳಕಿಗೆ ಬರುತ್ತಿವೆ. ಇದು ಜಿಲ್ಲಾಡಳಿತ ಹಾಗೂ ರ್ಯಾಗಿಂಗ್ ನಡೆಸುವ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಕರೆಗಂಟೆಯಾದರೂ ಕೂಡ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಹೊರ ರಾಜ್ಯ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ನಗರದ ಶಾಲಾ-ಕಾಲೇಜುಗಳಿಗೆ ಆಗಮಿಸುತ್ತಾರೆ. ಈ ವಿದ್ಯಾರ್ಥಿಗಳು ತಮ್ಮ ಹೆತ್ತವರಿಂದ ದೂರವಿದ್ದು, ನಗರದಲ್ಲೇ ಹಾಸ್ಟೆಲ್‌ಗಳಲ್ಲಿ ನೆಲೆಸಿ ವಿದ್ಯಾರ್ಜನೆ ಮಾಡುತ್ತಾರೆ. ಹಾಗಾಗಿ ಈ ಪ್ರಕರಣವು ಇಂತಹ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಭಯದ ವಾತಾವರಣ ನಿರ್ಮಿಸಿದೆ.

ಜಿಲ್ಲೆಯ ಹಲವು ಶಾಲಾ-ಕಾಲೇಜುಗಳಲ್ಲಿ ರ್ಯಾಗಿಂಗ್ ಮುಕ್ತ ಸಮಿತಿಯಿದೆಯಾದರೂ ಕೇವಲ ಹೆಸರಿಗೆ ಮಾತ್ರ ಇರುವಂತಾಗಿದೆ. ಇನ್ನೂ ಕೆಲವು ಶಾಲಾ-ಕಾಲೇಜುಗಳಲ್ಲಿ ರ್ಯಾಗಿಂಗ್ ಮುಕ್ತ ಸಮಿತಿಯೇ ರಚನೆಯಾಗಿಲ್ಲ. ವಿದ್ಯಾಸಂಸ್ಥೆಗಳಲ್ಲಿ ರ್ಯಾಗಿಂಗ್ ಮೊದಲಾದ ವಿದ್ಯಾರ್ಥಿ ವಿರೋಧಿ ಚಟುವಟಿಕೆಗಳು ನಡೆಯದಂತೆ ಸಮಿತಿಯನ್ನು ರಚಿಸಿ ಕಾರ್ಯನಿರ್ವಹಿಸಬೇಕಾಗಿದೆ. ಯಾವುದೇ ವಿದ್ಯಾರ್ಥಿಗಳು ಕಿರುಕುಳವನ್ನು ಎದುರಿಸುತ್ತಿದ್ದರೆ ಆತಂಕಕ್ಕೆ ಒಳಪಡದೆ, ತಮ್ಮ ವಿದ್ಯಾಸಂಸ್ಥೆಯ ಸಂಬಂಧ ಪಟ್ಟ ಸಮಿತಿಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ದೈರ್ಯ ತುಂಬುವಂತಹ ಕಾರ್ಯವನ್ನು ಸಮಿತಿಯು ನಿರ್ವಹಿಸಬೇಕು. ವಿದ್ಯಾರ್ಥಿಗಳ ನಡುವೆ ಭಯಮುಕ್ತ ವಾತಾವರಣ ಸೃಷ್ಟಿಸುವಲ್ಲಿ ವಿದ್ಯಾಸಂಸ್ಥೆಯು ಬದ್ಧರಾಗಿರಬೇಕು. ಹಾಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ರ್ಯಾಗಿಂಗ್ ಮುಕ್ತ ಅಭಿಯಾನ ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಎಸ್‌ಎಫ್‌ಐ ದ.ಕ. ಜಿಲ್ಲಾ ಸಮಿತಿಯು ಅಪರ ಜಿಲ್ಲಾಧಿಕಾರಿ ಹಾಗು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ಈ ಸಂದರ್ಭ ಎಸ್‌ಎಫ್‌ಐ ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ್, ಪದಾಧಿಕಾರಿಗಳಾದ ಸಿನಾನ್ ಬೆಂಗ್ರೆ, ಶಮಾಝ್ ಕೆಸಿ ರೋಡ್, ಜಿಲ್ಲಾ ನಾಯಕರಾದ ತಿಲಕ್ ಕುತ್ತಾರ್, ವಿನೀತ್ ದೇವಾಡಿಗ, ಸಲೋನಿ ಬೋಳಾರ್, ಸಫ್ವಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News