ಮಂಗಳೂರು: ನಾಲ್ವರು ಉದ್ಯಮಿಗಳ ಮನೆ, ಆಸ್ಪತ್ರೆ, ಕಚೇರಿಗಳಿಗೆ ಐಟಿ ದಾಳಿ

Update: 2021-02-17 17:35 GMT

ಮಂಗಳೂರು, ಫೆ.17: ಕರಾವಳಿ ನಗರಿ ಮಂಗಳೂರಿನಲ್ಲಿ ನಾಲ್ವರು ಪ್ರತಿಷ್ಠಿತ ಉದ್ಯಮಿಗಳ ಮಾಲಕತ್ವದ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆಯ (ಐಟಿ) ಅಧಿಕಾರಿಗಳು ಬುಧವಾರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಮಂಗಳೂರಿನ ಎ.ಜೆ. ಗ್ರೂಪ್‌ನ ಎ.ಜೆ. ಶೆಟ್ಟಿ, ಯೆನೆಪೊಯ ಗ್ರೂಪ್‌ನ ಯೆನೆಪೊಯ ಅಬ್ದುಲ್ಲಾ ಕುಂಞಿ, ಶ್ರೀನಿವಾಸ ಗ್ರೂಪ್ ಆಫ್ ಎಜುಕೇಶನಲ್ ಇನ್‌ಸ್ಟಿಟ್ಯೂಟ್‌ನ ಶ್ರೀನಿವಾಸ ರಾವ್, ಕಣಚೂರು ಗ್ರೂಪ್‌ನ ಕಣಚೂರು ಮೋನು ಅವರ ಮೇಲೆ, ಸಂಸ್ಥೆಗಳ ಮೇಲೆ ಈ ದಾಳಿ ನಡೆದಿದೆ. ಸುಮಾರು 20ಕ್ಕೂ ಅಧಿಕ ಸ್ಥಳಗಳಲ್ಲಿ ಐಟಿ ದಾಳಿ ನಡೆಸಲಾಗಿದೆ.

ಐಟಿ ದಾಳಿಯ ವೇಳೆ ಅಧಿಕಾರಿಗಳು ಉದ್ಯಮಿಗಳಿಗೆ ಸೇರಿದ ಕೋಟ್ಯಂತರ ಮೌಲ್ಯದ ಆಸ್ತಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದು, ಕಾರ್ಯಾಚರಣೆ ಸಂದರ್ಭ ಕೋಟ್ಯಂತರ ನಗದು ಮತ್ತು ಭಾರೀ ಪ್ರಮಾಣದ ಚಿನ್ನ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕಾರ್ಯಾಚರಣೆಯಲ್ಲಿ ಬೆಂಗಳೂರು ಐಟಿ ಕಚೇರಿ ಸೇರಿದಂತೆ ವಿವಿಧ ರಾಜ್ಯಗಳಿಂದ 260ಕ್ಕೂ ಅಧಿಕ ಐಟಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಸೋಮವಾರ ಸಂಜೆಯೇ ಮಂಗಳೂರಿಗೆ ಬಂದಿಳಿದಿದ್ದ ಅಧಿಕಾರಿಗಳು ಪ್ರತಿಷ್ಠಿತ ಉದ್ಯಮಿಗಳ ಮೇಲೆ ದಾಳಿ ನಡೆಸಲು ಸಿದ್ಧರಾಗಿದ್ದರು. ಈ ಪ್ರಕರಣದಲ್ಲಿ ಉದ್ಯಮಿಗಳು ಭಾರೀ ಪ್ರಭಾವಿಗಳಾಗಿದ್ದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಪಡೆಯಲಾಗಿತ್ತು ಎಂದು ತಿಳಿದುಬಂದಿದೆ.

ದಾಳಿ ನಡೆಸಲು ಐಟಿ ಅಧಿಕಾರಿಗಳು ದೊಡ್ಡ ನಾಟಕವನ್ನೇ ಆಡಿದ್ದಾರೆ. ಮಂಗಳವಾರ ಸಂಜೆಯೇ ಮಂಗಳೂರಿಗೆ ಬಂದಿಳಿದಿದ್ದ 260ಕ್ಕೂ ಅಧಿಕ ಐಟಿ ಅಧಿಕಾರಿಗಳು, ಕೇರಳದಲ್ಲಿ ಫುಟ್‌ಬಾಲ್ ಚಾಂಪಿಯನ್‌ಶಿಪ್‌ಗೆ ತೆರಳುವುದಾಗಿ 70ಕ್ಕೂ ಅಧಿಕ ಇನ್ನೋವಾ ಟ್ಯಾಕ್ಸಿಗಳನ್ನು ಬುಕ್ ಮಾಡಿದ್ದರು. ಅದರಂತೆ ಟ್ಯಾಕ್ಸಿ ಕಾರುಗಳು ಬೆಳಗ್ಗೆ ಮೊದಲೇ ಸೂಚಿಸಿದ್ದ ಜಾಗಗಳಿಗೆ ಆಗಮಿಸಿದ್ದವು. ಕಾರುಗಳಿಗೆ ಫುಟ್ಬಾಲ್‌ನ ಸ್ಟಿಕ್ಕರ್ ಅಂಟಿಸಿದ್ದರು ಎನ್ನುವ ಮಾಹಿತಿಯು ಸದ್ಯ ಎಲ್ಲರನ್ನು ನಿಬ್ಬೆರಗಾಗಿಸುವಂತಿದೆ.

ದಾಳಿಗೆ ಕಾರಣವೇನು?: ಕಳೆದ ವರ್ಷ ಕೊರೋನ ಸೋಂಕು ಹೆಚ್ಚಳವಾದಾಗ ಜನಸಾಮಾನ್ಯರಿಂದ ಚಿಕಿತ್ಸೆಯ ಹೆಸರಿನಲ್ಲಿ ಲಕ್ಷಾಂತರ ರೂ. ಪೀಕಿಸಿದ ಆರೋಪ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೇಳಿ ಬಂದಿತ್ತು. ಕೊರೋನ ಚಿಕಿತ್ಸೆಯ ಹೆಸರಿನಲ್ಲಿ ತೆರಿಗೆ ವಂಚಿಸಿ ಕೋಟ್ಯಂತರ ರೂ. ಆಸ್ತಿ ಗಳಿಕೆ ಮಾಡಿದ್ದೇ ಐಟಿ ದಾಳಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಐಟಿ ದಾಳಿ ಸಂದರ್ಭ ಉದ್ಯಮಿಯೊಬ್ಬರ ಮನೆಯಲ್ಲಿ ಐದು ಕೋಟಿಗೂ ಮಿಗಿಲಾದ ನಗದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ನಗರದಲ್ಲಿ ಭಾರೀ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹೊಂದಿದ್ದ ಈ ಉದ್ಯಮಿಯ ಆಸ್ತಿ, ವ್ಯವಹಾರ ನೋಡಿ ಸ್ವತಃ ಐಟಿ ಅಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದರು ಎಂದು ವಿವರಿಸಲಾಗಿದೆ.

ಉದ್ಯಮಿ ಹಾಗೂ ದಾಳಿಗೊಳಗಾದ ಶ್ರೀನಿವಾಸ ರಾವ್ ಅವರ ಬಂಗಲೆಯು ನಗರದ ಜೈಲ್ ರಸ್ತೆಯಲ್ಲಿದೆ. ಐಟಿ ಅಧಿಕಾರಿಗಳು ಇಲ್ಲಿನ ಬಂಗಲೆಗೆ ದಾಳಿ ನಡೆಸಿದ ಸಂದರ್ಭ ಮನೆಯಲ್ಲಿದ್ದ ಶ್ರೀನಿವಾಸ ರಾವ್ ಅವರ ವೃದ್ಧ ತಂದೆ ರಾಘವೇಂದ್ರ ರಾವ್ ದಿಢೀರ್ ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್ ತರಿಸಿ ಚಿಕಿತ್ಸೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News