ತಲಪಾಡಿ: ದುಪ್ಪಟ್ಟು ದರ ವಸೂಲಿ ವಿರುದ್ಧ ಫೆ. 18ರಂದು ಟೋಲ್ ಗೇಟ್ ಬಳಿ ಪ್ರತಿಭಟನೆ

Update: 2021-02-17 07:23 GMT

ಉಳ್ಳಾಲ: ಫಾಸ್ಟ್ಯಾಗ್ ಕಡ್ಡಾಯ ಹಾಗೂ ಫಾಸ್ಟ್ಯಾಗ್ ರಹಿತ ಸಂಚಾರಿಗಳಿಗೆ ದುಪ್ಪಟ್ಟು ದರ ವಸೂಲಿ ಮಾಡುವುದರ ಹಿನ್ನೆಲೆಯಲ್ಲಿ ತಲಪಾಡಿ ನಾಗರಿಕರು  ಫೆ.18 ಗುರುವಾರ ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ತಲಪಾಡಿಯಲ್ಲಿ ಹೋರಾಟಗಾರರ ಸಭೆ ನಡೆದಿದೆ. 

ಸಭೆಯಲ್ಲಿ ಮಾತನಾಡಿದ ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದೀಕ್ ತಲಪಾಡಿ, ಟೋಲ್ ದರ, ಫಾಸ್ಟ್ಯಾಗ್ ನಿಂದ ಬಹಳಷ್ಟು ತೊಂದರೆ ಆಗುತ್ತದೆ. ಟೋಲ್ ಸಮಸ್ಯೆ ಬಗ್ಗೆ ಸಚಿವರ, ಜನಪ್ರತಿನಿಧಿಗಳ ಗಮನ ಸೆಳೆದಿದ್ದೇವೆ. ಮನವಿ ಕೂಡಾ ಮಾಡಿಯಾಗಿದೆ. ಇನ್ನು ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ. ಒಟ್ಟಿನಲ್ಲಿ ಜನರನ್ನು ದೋಚುವ ಕಾರ್ಯ ನಡೆಯುತ್ತಿದೆ. ಫಾಸ್ಟ್ಯಾಗ್ ಕಡ್ಡಾಯ ಮಾಡಲಿ ತೊಂದರೆ ಇಲ್ಲ, ಆದರೆ ಜನರನ್ನು ದೋಚುವ ಕಾರ್ಯದ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.

ಫೆ.18ರಂದು ಬೆಳಿಗ್ಗೆ 9 ರಂದು ಪ್ರತಿಭಟನೆ ನಡೆಸಲಾಗುವುದು. ರಸ್ತೆ ತಡೆ ಮಾಡಿ ಹೋರಾಟ ಮಾಡಲಾಗುವುದು. ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ನಡೆಯಲಿದೆ ಎಂದು ಅವರು ಹೇಳಿದರು.

ಈ ಬಗ್ಗೆ ರಾಜಕೀಯ ರಹಿತ ಸಭೆಯಲ್ಲಿ ಹೊರಾಟಗಾರರ ಚರ್ಚೆ ನಡೆದು ಒಂದು ಸಮಿತಿ ರಚಿಸಲು ನಿರ್ಧರಿಸಲಾಯಿತು. 

ಪಕ್ಷ ಭೇದ ಬಿಟ್ಟು ಎಲ್ಲಾ ಜನಪ್ರತಿನಿಧಿಗಳು ಸೇರಬೇಕು. ಇದು ಎಲ್ಲರಿಗೂ ಸಂಬಂಧಪಟ್ಟ ಸಮಸ್ಯೆ. ಎಲ್ಲರೂ ಸೇರಿ ಅಭಿಪ್ರಾಯ ವ್ಯಕ್ತಪಡಿಸಲಿ ಎಂದು ಸಭೆಯಲ್ಲಿ ಒತ್ತಾಯಗಳು ಬಂದವು.

ಈ ಸಂದರ್ಭದಲ್ಲಿ ತಲಪಾಡಿ ಟೊಲ್ಗೇಟ್ ಹೋರಾಟ ಸಮಿತಿ ರಚಿಸಲಾಯಿತು. ಇದಕ್ಕೆ 11 ಮಂದಿ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಿದ್ದೀಕ್ ತಲಪಾಡಿ, ತಾ.ಪಂ.ಸದಸ್ಯರಾದ ಸಿದ್ದೀಕ್ ತಲಪಾಡಿ, ಸುರೇಖಾ, ಇಸ್ಮಾಯಿಲ್ ಕೆಸಿರೋಡ್, ಡಿವೈಎಫ್ಐ ಉಳ್ಳಾಲ ವಲಯ ಅಧ್ಯಕ್ಷ ಅಶ್ರಫ್ ಕೆಸಿರೋಡ್, ರೋಹಿತ್, ವಿನು ಶೆಟ್ಟಿ, ವೈಭವ ಶೆಟ್ಟಿ, ಜಗದೀಶ್, ಮಂಜಣ್ಣ, ನವೀನ, ಸರ್ಫರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News