×
Ad

ರೋಟರಿ ಸಂಸ್ಥೆಯ ಕೊಡುಗೆ : ಫೆ. 20ರಂದು ಪುತ್ತೂರಿನಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ

Update: 2021-02-17 17:20 IST

ಪುತ್ತೂರು : ಕಿಡ್ನಿ ವೈಫಲ್ಯದಿಂದ ಬಳಲುವವರಿಗೆ ಸುಲಭವಾಗಿ ಚಿಕಿತ್ಸೆ ದೊರಕಿಸಿಕೊಡುವ ಉದ್ದೇಶದೊಂದಿಗೆ ರೋಟರಿ ಕ್ಲಬ್ ಪುತ್ತೂರು ಮತ್ತು ಪುತ್ತೂರು ರೋಟರಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಪುತ್ತೂರಿನ  ಮಹಾವೀರ ಆಸ್ಪತ್ರೆಯಲ್ಲಿ ಸುಮಾರು ರೂ. 50 ಲಕ್ಷ ವೆಚ್ಚದಲ್ಲಿ ಡಯಾಲಿಸಿಸ್ ಘಟಕವನ್ನು ಆರಂಭಿಸಲಾಗಿದ್ದು, ಫೆ. 20ರಂದು ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಲಾಗುವುದು ಎಂದು ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ, ಪುತ್ತೂರು ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕ್ಸೇವಿಯರ್ ಡಿ'ಸೋಜಾ ತಿಳಿಸಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿಗಳನ್ನು ನೀಡಿ, ಮಹಾವೀರ ಆಸ್ಪತ್ರೆಯವರು ಡಯಾಲಿಸಿಸ್ ಘಟಕಕ್ಕೆ ಸ್ಥಳಾವಕಾಶವನ್ನು ಒದಗಿಸಿಕೊಟ್ಟಿದ್ದು, ಮಂಗಳೂರಿನ ಎ.ಜೆ. ಆಸ್ಪತ್ರೆಯ ಸಿಬಂದಿಗಳನ್ನು ನಿಯೋಜಿಸಲಿದೆ. ಪುತ್ತೂರು ರೋಟರಿ ಕ್ಲಬ್ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಸಹಕಾರದೊಂದಿಗೆ 3 ಡಯಾಲಿಸಿಸ್ ಯಂತ್ರಗಳನ್ನು ಮತ್ತು ಅದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ಹೇಳಿದರು.

1965ರಲ್ಲಿ ಸ್ಥಾಪಿಸಲ್ಪಟ್ಟ ಪುತ್ತೂರು ರೋಟರಿ ಕ್ಲಬ್ ಕಳೆದ 56 ವರ್ಷಗಳಿಂದ ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. 2017ರಲ್ಲಿ ಸುಮಾರು ರೂ. 85 ಲಕ್ಷ ವೆಚ್ಚದಲ್ಲಿ ರೋಟರಿ-ಕ್ಯಾಂಪ್ಕೊ ಬ್ಲಡ್ ಬ್ಯಾಂಕ್‍ನಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ರಕ್ತವನ್ನು ಪ್ಲಾಸ್ಮಾ, ಪ್ಲೇಟ್‍ಲೆಟ್, ಫ್ಯಾಕಡ್‍ಸೆಲ್ಸ್ ಎಂಬುದಾಗಿ ವಿಂಗಡಿಸುವ ಸೂತನ ತಂತ್ರಜ್ಞಾನವನ್ನು ಅಳವಡಿಸಿ ಜನತೆಯ ಸೇವೆಗಾಗಿ ಸಮರ್ಪಿಸಲಾಯಿತು. ಎನ್‍ಎಸಿಒದಿಂದ ಮಾನ್ಯತೆ ಪಡೆದ, ದ.ಕ. ಜಿಲ್ಲೆಯ ಏಕೈಕ ಖಾಸಗಿ ಬ್ಲಡ್ ಬ್ಯಾಂಕ್ ಎಂಬ ಹಿರಿಮೆಯನ್ನು ಗಳಿಸಿದೆ ಎಂದು ಅವರು ವಿವರಿಸಿದರು.

ಈ ನೂತನ ಡಯಾಲಿಸಿಸ್ ಘಟಕವನ್ನು ಫೆ.20 ರಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರೋಟರಿ ಜಿಲ್ಲಾ ಗವರ್ನರ್ ಎಂ. ರಘುನಾಥ್ ಭಟ್, ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ, ಮಹಾವೀರ ಮೆಡಿಕಲ್ ಸೆಂಟರ್‍ನ ಮಾಲಕ ಡಾ. ಅಶೋಕ್ ಪಡಿವಾಳ್, ಪುತ್ತೂರು ನಗರಸಭಾ ಸದಸ್ಯ ಜೀವಂಧರ್ ಜೈನ್, ಜಿಲ್ಲಾ ರೋಟರಿ ಫೌಂಡೇಶನ್ನಿನ ಅಧ್ಯಕ್ಷ ಕೆ. ಕೃಷ್ಣ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ರೋಟರಿ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯದರ್ಶಿ ದೀಪಕ್ ಕೆ.ಪಿ., ಖಜಾಂಚಿ ರವಿ, ಸಂಘಟಕ ಉಮಾನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News