×
Ad

ಬಾಲಭವನಗಳ ಸಿಬ್ಬಂದಿ ಖಾಯಮಾತಿಗೆ ಪ್ರಸ್ತಾವನೆ: ಚಿಕ್ಕಮ್ಮ ಬಸವರಾಜ್

Update: 2021-02-17 17:23 IST

ಮಂಗಳೂರು, ಫೆ. 17: ರಾಜ್ಯದ 30 ಜಿಲ್ಲೆಗಳಲ್ಲಿರುವ ಬಾಲಭವನಗಳ ಕಾರ್ಯ ಚಟುವಟಿಕೆಗಳನ್ನು ಸಕ್ರಿಯ ಹಾಗೂ ಗುಣಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ  ಖಾಯಂ ಸಿಬ್ಬಂದಿ ನೇಮಕಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ತಿಳಿಸಿ್ದಾರೆ.

ನಗರದ ಕದ್ರಿ ಬಾಲಭವನಕ್ಕೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಅವರು ಸುದ್ದಿಗೆಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದ 30 ಬಾಲಭವನಗಳಲ್ಲಿ 18 ಬಾಲಭವನಗಳು ಮಾತ್ರವೇ ಸ್ವಂತ ಕಟ್ಟಡವನ್ನು ಹೊಂದಿವೆ. ಬಾಲಭವನಗಳಲ್ಲಿ ಸದ್ಯ ಕಾರ್ಯಕ್ರಮ ಸಹಾಯಕರು ಹಾಗೂ ಸಂಯೋಜಕರಾಗಿ ತಲಾ ಇಬ್ಬರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ತಾತ್ಕಾಲಿಕ ಕೆಲಸ ಹಾಗೂ ಕಡಿಮೆ ವೇತನದಿಂದಾಗಿ ಬಹುತೇಕ ಬಾಲಭವಗಳಲ್ಲಿ ಸಿಬ್ಬಂದಿ ಕೆಲಸ ತೊರೆಯುವುದರಿಂದ ಸ್ಥಳೀಯ ಮಕ್ಕಳಿಗೆ ಗುಣಮಟ್ಟದ ಚಟುವಟಿಕೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರೂಪ್ ಡಿ ದರ್ಜೆಯ ಸರಕಾರಿ ವೇತನದಂತೆ ಸಿಬ್ಬಂದಿಯನ್ನು ಖಾಯಮಾತಿಗೆ ಜತೆಗೆ 10 ಬಾಲಭವನಗಳಿಗೆ ಒಬ್ಬರಂತೆ ಅಧಿಕಾರಿಯೊಬ್ಬರನ್ನು ನಿಯೋಜಿಸಿ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಲು ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದ್ದು, ಶೀಘ್ರವೇ ಮಂಜೂರಾತಿ ದೊರೆಯುವ ನಿರೀಕ್ಷೆ ಇದೆ ಎಂದರು.

ಕದ್ರಿ ಪಾರ್ಕ್‌ನ ಬಳಿ ಇರುವ ಬಾಲ ಭವನದಲ್ಲಿ ಗ್ರಾಮೀಣ ಪ್ರದೇಶದ ಹೆಚ್ಚು ಮಕ್ಕಳು ಬಂದು ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಶ್ರಮ ವಹಿಸಬೇಕೆಂದು ಅಲ್ಲಿನ ಸಿಬ್ಬಂದಿಗೆ ಈ ಸಂದರ್ಭ ಅವರು ಸೂಚನೆ ನೀಡಿದರು.

ಕದ್ರಿ ಬಾಲಭವನದಲ್ಲಿ ಮನರಂಜನೆಕಗಾಗಿ ಪುಟಾಣಿ ರೈಲನ್ನು ಅಳವಡಿಸಲಾಗಿದೆ. ಬಾಲಭವನದ ಆವರಣದಲ್ಲಿ ಜೋಕಾಲಿ, ಜಾರುಬಂಡಿ ಮೊದಲಾದ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ಕಳೆದ ಮಾರ್ಚ್‌ನಿಂದ ಸ್ಥಗಿತಗೊಂಡಿದ್ದ ಬಾಲಭವನದ ಚಟುವಟಿಕೆಗಳು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಇದೀಗ ಆರಂಭಗೊಂಡಿದೆ. ಬಾಲ ಭವನದ ಕಟ್ಟಡ, ಆವರಣಗೋಡೆ ಹಾಗೂ ಆಟಿಕೆ ಸಾಮಗ್ರಿಗಳ ದುರಸ್ತಿಗೆ ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ 25 ಲಕ್ಷ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ರಾಜ್ಯ ಬಾಲಭವನಕ್ಕೆ ಬಜೆಟ್‌ನಲ್ಲಿ 10 ಕೋಟಿ ರೂ. ಮಂಜೂರಾಗಿದ್ದು, ಈ ಬಾರಿ 17 ಕೋಟಿ ರೂ.ಗಳ ಬೇಡಿಕೆಯನ್ನು ಸಲ್ಲಿಸಲಾ ಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಬಾಲ ಭವನಗಳ ಬೇಡಿಕೆಗಳ ಅನುಸಾರವಾಗಿ ಅಲ್ಲಿನ ಕಾರ್ಯಚಟುವಟಿಕೆಗಳಿಗೆ ಅನುದಾನವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

ಪುಟಾಣಿ ರೈಲಿನಲ್ಲಿ ಪ್ರಯಾಣಿಸಿ ಪರಿಶೀಲನೆ

ಕದ್ರಿ ಬಾಲಭವನದ ಪುಟಾಣಿ ರೈಲು ಆರಂಭಗೊಂಡಾಗಿನಿಂದ ಹಲವಾರು ಬಾರಿ ಸ್ಥಗಿತಗೊಂಡು, ಆರಂಭಗೊಳ್ಳುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಿಕ್ಕಮ್ಮ ಬಸವರಾಜ್, ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಸಮರ್ಪಕ ರೀತಿಯಲ್ಲಿ ರೈಲು ಹಳಿ, ಇಂಜಿನ್ ಸೇರಿದಂತೆ ದುರಸ್ತಿಗೆ ಅಗತ್ಯವಾದ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಸರಕಾರದ ಮೂಲಕ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಮಾತ್ರವಲ್ಲದೆ ಪ್ರಸ್ತುತ ಚಾಲನೆಯಲ್ಲಿರುವ ಪುಟಾಣಿ ರೈಲಿನಲ್ಲಿ ಸಂಚರಿಸಿ ಪರಿಶೀಲಿಸಿದರು. ರೈಲು ನಿರ್ವಹಣೆಯ ಹೊಣೆ ಹೊತ್ತಿರುವ ಗುತ್ತಿ ದಾರರೊಂದಿಗೆ ಮಾತುಕತೆ ನಡೆಸಿದ ಅವರು, ರೈಲಿನ ಉತ್ತಮ ನಿರ್ವಹಣೆಯ ಸಲುವಾಗಿ ಜಿಲ್ಲೆಯ ಬೃಹತ್ ಸಂಸ್ಥೆಗಳ ಸಿಆರ್‌ಎಸ್ ನಿಧಿಯನ್ನು ಬಳಸಿಕೊಳ್ಳುವ ಕುರಿತಂತೆ ಕ್ರಮ ವಹಿಸಲು ಸೂಚಿಸಿದರು.

ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಪಾಪ ಬೋವಿ, ಇಲಾಖೆಯ ಅಧಿಕಾರಿ ಶ್ಯಾಮಲಾ, ವಾರ್ತಾಧಿಕಾರಿ ಮಂಜುನಾಥ್, ಬಾಲಭವನದ ಸಿಬ್ಬಂದಿ ಶರತ್ ಹಾಗೂ ಅಶ್ವಿನಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News