ಕಾಡೂರು ಗ್ರಾಪಂ; ಚೀಟಿ ಎತ್ತಿ ಅಧ್ಯಕ್ಷ -ಉಪಾಧ್ಯಕ್ಷ ಆಯ್ಕೆ: ಪಾಂಡುರಂಗ- ಅಮಿತಾಗೆ ಒಲಿದ ಅದೃಷ್ಟ

Update: 2021-02-17 15:00 GMT

ಬ್ರಹ್ಮಾವರ, ಫೆ.17: ಕಾಡೂರು ನಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಮಾನ ಮತಗಳು ಬಿದ್ದ ಹಿನ್ನೆಲೆ ಯಲ್ಲಿ ಅದೃಷ್ಟದ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಪಾಂಡುರಂಗ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಪಕ್ಷೇತರ ಸದಸ್ಯೆ ಅಮಿತಾ ರಾಜೇಶ್ ಆಯ್ಕೆಯಾದರು. ಒಟ್ಟು 12 ಸದಸ್ಯ ಬಲದ ಪಂಚಾಯತ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಾಂಡುರಂಗ ಶೆಟ್ಟಿ ಮತ್ತು ರಘುರಾಮ ಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಮಿತಾ ಮತ್ತು ಪ್ರಭಾವತಿ ನಾಮಪತ್ರ ಸಲ್ಲಿಸಿದ್ದರು.

ಚುನಾವಣೆಯಲ್ಲಿ ಇಬ್ಬರೂ 6-6 ಸಮಾನ ಮತಗಳನ್ನು ಪಡೆದ ಹಿನ್ನೆಲೆ ಯಲ್ಲಿ ಚುನಾವಣಾಧಿಕಾರಿ ಪ್ರದೀಪ್ ಕುಮಾರ್ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದರು. ಇದರಲ್ಲಿ ಪಾಂಡುರಂಗ ಶೆಟ್ಟಿ ಹಾಗೂ ಅಮಿತಾ ರಾಜೇಶ್‌ಗೆ ಅದೃಷ್ಟ ಒಲಿದು ಬಂತು. ಇವರಿಬ್ಬರೂ ನಡೂರು ಎರಡನೇ ವಾರ್ಡಿನ ಸದಸ್ಯರಾಗಿದ್ದಾರೆ.

ಕೆರಾಡಿ ಗ್ರಾಪಂ: ಕಾಂಗ್ರೆಸ್‌ಗೆ ಒಲಿದ ಅದೃಷ್ಟ

ಕುಂದಾಪುರ: ಕೆರಾಡಿ ಗ್ರಾಪಂನ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಗಿರಿಜಾ ಶೆಟ್ಟಿ ಚೀಟಿ ಎತ್ತುವ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸುದರ್ಶನ್ ಬಿ.ಆರ್. ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.

14 ಸದಸ್ಯ ಬಲದ ಕೆರಾಡಿ ಗ್ರಾಪಂನಲ್ಲಿ 8 ಬಿಜೆಪಿ ಹಾಗೂ 6 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಗಿರಿಜಾ ಶೆಟ್ಟಿ ಹಾಗೂ ಬಿಜೆಪಿಯಿಂದ ಜ್ಯೋತಿ ಶೆಟ್ಟಿ ಸ್ಪರ್ಧಿಸಿದ್ದರು. ಮತದಾನದ ವೇಳೆ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಕಾಂಗ್ರೆಸ್‌ಗೆ ಮತ ಹಾಕಿದ ಪರಿಣಾಮ ಇಬ್ಬರೂ ತಲಾ 7 ಸಮಾನ ಮತಗಳನ್ನು ಪಡೆದರು. ಅಂತಿಮವಾಗಿ ಚೀಟಿ ಎತ್ತುವ ಮೂಲಕ ಗಿರಿಜಾ ಶೆಟ್ಟಿ ಆಯ್ಕೆಯಾದರು.

ಉಪಾಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಬಿ.ಆರ್. ಸುದರ್ಶನ್ ಶೆಟ್ಟಿ 8 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತರಾಗಿ ಕಣಕ್ಕಿಳಿದಿದ್ದ ವುಂಜು ಕೊಠಾರಿ 6 ಮತ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News