×
Ad

ರಾಮಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ : ಪೇಜಾವರಶ್ರೀ

Update: 2021-02-17 20:20 IST

ಉಡುಪಿ, ಫೆ.17: ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಎಂಬುದು ಬೇನಾಮಿ ಸಂಸ್ಥೆ ಅಲ್ಲ. ಅದು ಅಧಿಕೃತವಾಗಿ ನೊಂದಣಿಗೊಂಡಿರುವ ಟ್ರಸ್ಟ್. ಟ್ರಸ್ಟ್ ನೊಂದಾವಣಿಗೆ ಅದರದ್ದೇ ಆದ ನೀತಿ ನಿಯಮಾವಳಿಗಳಿವೆ. ದೇಣಿಗೆ ಸಂಗ್ರಹ ಮಾಡಲು ಸಹ ಅದರದ್ದೇ ಆದ ಕಾನೂನಿದೆ ಎಂದು ಪೇಜಾವರ ಮಠ ಶ್ರೀವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

ಉಡುಪಿಯ ಪೇಜಾವರ ಮಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಬೆಂಗಳೂರಿನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುತಿದ್ದರು.

ಟ್ರಸ್ಟ್ ನೊಂದಣಿಗೊಂಡಿರುವ ಸಂಸ್ಥೆಯಾಗಿದ್ದು, ದೇಣಿಗೆ ಸಂಗ್ರಹಿಸಲು ಅದರದ್ದೇ ಆದ ಕಾನೂನಿದೆ. ಸಂವಿಧಾನ ನಮಗೆ ಅಧಿಕಾರ ಕೊಟ್ಟಿದೆ. ಇದರಲ್ಲಿ ಪಾರದರ್ಶಕತೆ ಖಂಡಿತ ಬೇಕಾಗಿದೆ. ಸಂಶಯಗಳನ್ನು ಮುಂದಿಟ್ಟರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಮುಚ್ಚುಮರೆ ಮಾಡಲು ಯಾವುದೆ ವಿಷಯಗಳು ನಡೆಯುವುದಿಲ್ಲ. ಆಡಿಟ್ ಆಗಿ ಅದಕ್ಕೆ ಬೇಕಾಗಿರುವ ಪುರಾವೆಗಳನ್ನು ಕೊಡಲು ಸಾಧ್ಯವಿದೆ ಎಂದವರು ಹೇಳಿದರು.

ಯಾವುದೇ ಸಂಶಯಗಳನ್ನು ಇಟ್ಟು ಆರೋಪ ಮಾಡುವುದು ಸೂಕ್ತ. ರಾಮ ಜನ್ಮಭೂಮಿ ಟ್ರಸ್ಟ್‌ನಂತೆ ಅಧಿಕೃತವಾಗಿರುವ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡುತಿದ್ದಾರೆ. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಗೆ ದೇಣಿಗೆ ಸಂಗ್ರಹದ ಜವಾಬ್ದಾರಿ ನೀಡಲಾಗಿದೆ. ವಿಹಿಂಪನ ಮುಖ್ಯಸ್ಥರು ಆಯಾ ಊರಿನಲ್ಲಿ ಸಂಗ್ರಹ ನಿರತರಾಗಿದ್ದಾರೆ. ಹಿರಿಯ ಮುಂದಾಳುಗಳ ನೇತೃತ್ವದಲ್ಲಿ ಕಾರ್ಯಕರ್ತರು ನಿಧಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

ವಿಹಿಂಪ ಪುಂಡು ಪೋಕರಿಗಳ ಸಂಸ್ಥೆಯಲ್ಲ, ಇದು ಅಧಿಕೃತ ಸಂಸ್ಥೆ. ಹೀಗಾಗಿ ಇಂತಹ ಮಾತು ಬಳಸುವುದು ಯುಕ್ತವಲ್ಲ ಎಂದು ಉತ್ತರಿಸಿದ ಶ್ರೀಗಳು ಪ್ರತಿಯೊಂದು ಸಂಶಯಕ್ಕೆ ಪರಿಹಾರ ಇದೆ. ಸಂಶಯ ಇದೆ ಎಂದು ಅರೋಪ ಮಾಡಿದರೆ, ಆರೋಪದಲ್ಲಿಯೇ ಮುಗಿಯುತ್ತದೆ. ಆರೋಪಕ್ಕೆ ಪ್ರತ್ಯಾರೋಪ ಸಿಗುತ್ತದೆ, ಪ್ರಶ್ನೆಗೆ ಉತ್ತರ ಸಿಗುವುದಿಲ್ಲ, ಪ್ರಶ್ನೆ ಮಾಡಿದರೆ ಉತ್ತರ ಕೊಡಬಹುದು ಎಂದು ಪೇಜಾವರಶ್ರೀಗಳು ಮಾಜಿ ಮುಖ್ಯಮಂತ್ರಿಗಳ ಹೇಳಿಕೆಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News