×
Ad

ಐದಕ್ಕಿಂತ ಅಧಿಕ ಕೋವಿಡ್ ಸೋಂಕು ಪತ್ತೆಯಾದ ಪ್ರದೇಶಗಳನ್ನು ಕಂಟೈನ್ ಮೆಂಟ್ ಝೋನ್ ಗಳಾಗಿ ಘೋಷಣೆ -ದ.ಕ. ಜಿಲ್ಲಾಧಿಕಾರಿ

Update: 2021-02-17 20:50 IST

ಮಂಗಳೂರು : ನಿಯಂತ್ರಣದಲ್ಲಿರುವ ಕೋವಿಡ್ -19 ಸೋಂಕು ಮತ್ತೆ ದ.ಕ. ಜಿಲ್ಲೆಯಲ್ಲಿ ಮರುಕಳಿಸದಂತೆ ಹಾಗೂ ನೆರೆಯ ಜಿಲ್ಲೆಗಳಿಂದ ಸೋಂಕು ಹರಡದಂತೆ ತಡೆಯಲು ಇನ್ನು ಮುಂದೆ ವಿದ್ಯಾರ್ಥಿ ನಿಲಯ, ಹೋಟೆಲ್, ಹೋಮ್ ಸ್ಟೇ, ರೆಸಾರ್ಟ್ಸ್, ಮಾಲ್, ವಿದ್ಯಾ ಸಂಸ್ಥೆಗಳಲ್ಲಿ ಐದು ಅಥವಾ ಮಲ್ಪಟ್ಟು ಕೊವಿಡ್ -19 ಖಚಿತ ಪ್ರಕರಣಗಳು ಪತ್ತೆಯಾದಲ್ಲಿ ಇವುಗಳನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿ‌.ರಾಜೇಂದ್ರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕೋವಿಡ್ - 19 ಮತ್ತೆ ಜಿಲ್ಲೆಯಲ್ಲಿ ಮರುಕಳಿಸುವುದನ್ನು ತಡೆಯಲು ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು, ವಿದ್ಯಾರ್ಥಿಗಳಿಗೆ ಮಾಸ್ಕ್ ಅಳವಡಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆಗಿಂದಾಗ್ಗೆ ಕೈ ತೊಳೆದುಕೊಳ್ಳುವ ಬಗ್ಗೆ ತಿಳುವಳಿಕೆ ನೀಡುವುದು ಆಯಾ ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.

ಎಲ್ಲಾ ಹೋಟೆಲ್, ಮಾಲ್‌ಗಳಲ್ಲಿ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇರಳ ಮೂಲದ ಸಿಬ್ಬಂದಿಗಳ ಪಟ್ಟಿಯನ್ನು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಯವರು ಸಂಸ್ಥೆಯ ಮುಖ್ಯಸ್ಥರಿಂದ ಪಡೆದುಕೊಂಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿಧಿಕಾರಿಯವರಿಗೆ ಒಪ್ಪಿಸುವುದು. ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ  ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೊಳಪಡಿಸಿದ ಖರ್ಚು-ವೆಚ್ಚವನ್ನು ಆಯಾ ಸಂಸ್ಥೆಗಳ ಮುಖ್ಯಸ್ಥರು ಭರಿಸಬೇಕು. ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ ವಾಪ್ತಿಯಲ್ಲಿ ಬರುವ ಹೊಟೇಲ್, ಮಾಲ್  ಇತರ ಸಂಸ್ಥೆಗಳಿಂದ ಕೇರಳ ಮೂಲದವರ ಮಾಹಿತಿಯನ್ನು ಪಡೆದುಕೊಂಡು ಆಯಾ ತಾಲೂಕುಗಳ ಆರೋಗ್ಯಾಧಿಕಾರಿಯವರಿಗೆ ಒಪ್ಪಿಸುವುದು. ಗ್ರಾಮ ಮಟ್ಟದ ವ್ಯಾಪ್ತಿಯಲ್ಲಿ ಬರುವ ಹೊಟೇಲ್, ಮಾಲ್ ಇತರ ಸಂಸ್ಥೆಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಕೇರಳ ಮೂಲದ ಕೆಲಸಗಾರರ ಪಟ್ಟಿಯನ್ನು ಆಯಾ ಸಂಸ್ಥೆಯ ಮುಖ್ಯಸ್ಥರು ಅರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಒಳಪಡಿಸಲು ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿಯವರಿಗೆ ಒಪ್ಪಿಸಬೇಕು ಎಂದು ಹೇಳಿದರು.

ತಲಪಾಡಿ ಟೋಲ್ ಗೇಟ್‌ನಲ್ಲಿ ಕೇರಳದಿಂದ ಬರುವ ಜನರನ್ನು ಆಯ್ದುಆರ್.ಟಿ.ಸಿ ಪಿ.ಸಿ.ಆರ್  ಪರೀಕ್ಷೆಗೊಳ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ವಿಶೇಷ ತಂಡವನ್ನು ರಚಿಸಿರುತ್ತಾರೆ. ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪ್ಯಾರ ಮೆಡಿಕಲ್ ಇಂಜಿನಿಯರಿಂಗ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವವರು, ಪ್ರತಿನಿತ್ಯ ಪ್ರಯಾಣಿಸುವ ಕೇರಳ ಮೂಲದ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ಸಂಸ್ಥೆಯ ಮುಖ್ಯಸ್ಥರು ತಯಾರಿಸಿ ಆರೋಗ್ಯ ಇಲಾಖೆಗೆ ನೀಡಬೇಕು. 15 ದಿನಗಳಿಗೊಮ್ಮೆ ಅರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News