ಕೃಷ್ಣಾಪುರ ಶ್ರೀಗಳ ಪರ್ಯಾಯಕ್ಕೆ ಅಕ್ಕಿ ಮುಹೂರ್ತ

Update: 2021-02-17 15:38 GMT

ಉಡುಪಿ, ಫೆ.17: ಮುಂದಿನ ವರ್ಷದ ಜನವರಿ 18ರ ಮುಂಜಾನೆ ನಡೆಯುವ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯ ಮಹೋತ್ಸವದಲ್ಲಿ ನಾಲ್ಕನೇ ಬಾರಿ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರ ಪರ್ಯಾಯದ ಪೂರ್ವ ಭಾವಿ ಸಿದ್ಧತೆಗಳಲ್ಲಿ ಎರಡನೇಯದಾದ ಅಕ್ಕಿ ಮುಹೂರ್ತ ಇಂದು ಬೆಳಗ್ಗೆ ರಥಬೀದಿ ಯಲ್ಲಿರುವ ಕೃಷ್ಣಾಪುರ ಮಠದಲ್ಲಿ ಸಂಪನ್ನಗೊಂಡಿತು.

ಭಾವಿ ಪರ್ಯಾಯ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥರ ಉಪಸ್ಥಿತಿಯಲ್ಲಿ ಅಕ್ಕಿ ಮುಹೂರ್ತದ ಸಾಂಪ್ರದಾಯಿಕ ವಿಧಿವಿಧಾನಗಳು ನಡೆದವು. ಪುತ್ತಿಗೆ ಮತ್ತು ಶಿರೂರು ಮಠಾಧೀಶರನ್ನು ಹೊರತು ಪಡಿಸಿ ಉಳಿದೆಲ್ಲಾ ಮಠಗಳ ಶ್ರೀ ಇಂದಿನ ಅಕ್ಕಿ ಮುಹೂರ್ತದಲ್ಲಿ ಪಾಲ್ಗೊಂಡರು.

ಪರ್ಯಾಯ ನಡೆಯುವ ಒಂದು ವರ್ಷ ಮೊದಲೇ ಆರಂಭಗೊಳ್ಳುವ ಪೂರ್ವಭಾವಿ ಮುಹೂರ್ತಗಳಲ್ಲಿ ಅಕ್ಕಿ ಮುಹೂರ್ತ ಎರಡನೇಯದು. ಕಳೆದ ನವೆಂಬರ್‌ನಲ್ಲಿ ಬಾಳೆಮುಹೂರ್ತ ನಡೆದಿದ್ದು, ಇನ್ನು ಮುಂದೆ ಕಟ್ಟಿಗೆ ಮುಹೂರ್ತ ಹಾಗೂ ಪರ್ಯಾಯಕ್ಕೆ ಒಂದು ತಿಂಗಳು ಮೊದಲು ಭತ್ತ ಮುಹೂರ್ತ ನಡೆಯಲಿಕ್ಕಿವೆ.

ಬೆಳಗ್ಗೆ ಕೃಷ್ಣಾಪುರ ಮಠದಲ್ಲಿ ಪಟ್ಟದ ದೇವರಾದ ಕಾಳೀಯಮರ್ದನ ಕೃಷ್ಣ ಮತ್ತು ನರಸಿಂಹ ದೇವರ ಪೂಜೆಯ ಅನಂತರ ನವಗ್ರಹ ಪೂಜೆ ನಡೆಯಿತು. ಪ್ರಾರ್ಥನೆ ನಡೆದ ಬಳಿಕ ಅಕ್ಕಿ ಮುಡಿಯನ್ನು ಸುವರ್ಣ ಪಾಲಕಿಯಲ್ಲಿರಿಸಿಕೊಂಡು ಚಂದ್ರವೌಳೀಶ್ವರ, ಅನಂತೇಶ್ವರ ದೇವಸ್ಥಾನ, ಕೃಷ್ಣಮಠಕ್ಕೆ ತೆರಳಿ ಪ್ರಾರ್ಥನೆ ನಡೆಸಿದ ಬಳಿಕ ಕೃಷ್ಣಾಪುರ ಮಠಕ್ಕೆ ಮೆರವಣಿಗೆಯಲ್ಲಿ ಬಂದು ಚಿನ್ನದ ಮಂಟಪದಲ್ಲಿರಿಸಿ ಪೂಜಿಸಿ ಅಕ್ಕಿ ಮುಹೂರ್ತ ನಡೆಸಲಾಯಿತು.

ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು, ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು, ಪಲಿಮಾರು ಮಠದ ಹಿರಿಯ ಹಾಗೂ ಕಿರಿಯ ಯತಿಗಳಾದ ಶ್ರೀವಿದ್ಯಾಧೀಶತೀರ್ಥರು ಮತ್ತು ಶ್ರೀವಿದ್ಯಾರಾಜೇಶ್ವರತೀರ್ಥರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಡೆಯುವ ಅನ್ನ ದಾಸೋಹಕ್ಕಾಗಿ ಬೇಕಾದ ಅಕ್ಕಿ ಹಾಗೂ ಧಾನ್ಯಗಳನ್ನು ಸಂಗ್ರಹಿಸಿಡುವುದ ಕ್ಕಾಗಿ ಅಕ್ಕಿ ಮುಹೂರ್ತ ನಡೆಯುತ್ತದೆ. ಅನ್ನಬ್ರಹ್ಮನ ಕ್ಷೇತ್ರದಲ್ಲಿ ಅನ್ನದಾನ ಸಾಂಗವಾಗಿ ಆಗಲಿ ಎಂಬುದು ನಮ್ಮ ಇಚ್ಛೆ ಎಂದು ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು ಆಶೀರ್ವಚನದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಟೀಲು ದೇವಳದ ಮೊಕ್ತೇಸರ ವಾಸುದೇವ ಅಸ್ರಣ್ಣ, ಮುಲ್ಕಿಯ ಹರಿಕೃಷ್ಣ ಪುನರೂರು, ದ.ಕ.ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಕಿನ್ನಿಗೋಳಿಯ ಕೆ.ಭುವನಾಭಿರಾಮ ಉಡುಪ, ಕುಂಭಾಶಿ ದೇವಸ್ಥಾನದ ಸೂರ್ಯನಾರಾಯಣ ಉಪಾಧ್ಯಾಯ, ವೈ.ಎನ್.ರಾಮಚಂದ್ರ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News