ಮಾ.2: ಮಂಗಳೂರು ಮನಪಾ ಮೇಯರ್-ಉಪಮೇಯರ್ ಚುನಾವಣೆ
ಮಂಗಳೂರು, ಫೆ.17: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್‌ರ ಅಧಿಕಾರಾವಧಿಯು ಫೆ.28ಕ್ಕೆ ಮುಕ್ತಾಯ ಗೊಳ್ಳಲಿದ್ದು, 22ನೆ ಅವಧಿಯ ಮೇಯರ್- ಉಪಮೇಯರ್ ಆಯ್ಕೆಗೆ ಮಾ.2ರಂದು ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದೆ. ಅಲ್ಲದೆ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯೂ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ.
ಅಂದರೆ ಪಾಲಿಕೆಯ 33ನೇ ಮೇಯರ್/ಉಪ ಮೇಯರ್ ಸ್ಥಾನಕ್ಕೆ ಈಗಾಗಲೆ ಮೀಸಲಾತಿ ಪ್ರಕಟಗೊಂಡಿದೆ. ಮೇಯರ್ ಸ್ಥಾನವು ಸಾಮಾನ್ಯ ಮತ್ತು ಉಪ ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹಾಗಾಗಿ 33ನೆ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಹಿರಿಯ ಸದಸ್ಯ ರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು ಸಹಿತ ಬಿಜೆಪಿಯ ಎಲ್ಲಾ ಸದಸ್ಯರು ಅರ್ಹರಾಗುತ್ತಾರೆ. ಪ್ರಸ್ತುತ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ, ಅತ್ಯಂತ ಹಿರಿಯ ಸದಸ್ಯರ ಪಟ್ಟಿಯಲ್ಲಿರುವ ಪ್ರೇಮಾನಂದ ಶೆಟ್ಟಿಯ ಹೆಸರು ಮೇಯರ್ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಈ ಮಧ್ಯೆ ಮೇಯರ್ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾದ ಕಾರಣ ಇತರ ಸದಸ್ಯರು ಕೂಡ ಆಕಾಂಕ್ಷಿಗಳಾಗಿದ್ದಾರೆ. ಹಾಗಾಗಿ ಈ ಬಾರಿಯ ಮೇಯರ್ ಆಯ್ಕೆ ಕುತೂಹಲ ಹುಟ್ಟಿಸಿದೆ.
2018ರ ಮಾ.8ರಂದು ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತದ ಕೊನೆಯ ಮೇಯರ್ ಅವಧಿಯ 31ನೇ ಮೇಯರ್ ಆಗಿ ಭಾಸ್ಕರ್ ಎಂ. ಹಾಗೂ ಉಪ ಮೇಯರ್ ಆಗಿ ಮುಹಮ್ಮದ್ ಕುಂಜತ್ತಬೈಲ್ ಆಯ್ಕೆಯಾಗಿದ್ದರು. ಅವರ ಅಧಿಕಾರಾವಧಿ 2019ರ ಮಾ.8ರವರೆಗೆ ಇತ್ತು. ಆ ವೇಳೆಗೆ ಪಾಲಿಕೆ ಚುನಾವಣೆ ನಡೆಯಬೇಕಿತ್ತು. ಆದರೆ ವಾರ್ಡ್ ಮೀಸಲಾತಿ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಾದ ಕಾರಣ ಚುನಾವಣೆ ಮುಂದೂಡಲ್ಪಟ್ಟು ಆಡಳಿತಾಧಿಕಾರಿಗಳ ನೇಮಕವಾಗಿತ್ತು.
ತದನಂತರ 2019ರ ನ.12ರಂದು ಪಾಲಿಕೆಯ ಚುನಾವಣೆ ನಡೆದಿದ್ದು, ಬಿಜೆಪಿ 44, ಕಾಂಗ್ರೆಸ್ 14, ಎಸ್‌ಡಿಪಿಐ 2 ಸ್ಥಾನ ಪಡೆದಿತ್ತು. ಆದರೆ ಮೇಯರ್-ಉಪಮೇಯರ್ ಮೀಸಲಾತಿ ವಿಚಾರದಲ್ಲಿ ಮೂಡಿದ್ದ ಗೊಂದಲದಿಂದಾಗಿ ಮೂರು ತಿಂಗಳವರೆಗೆ ಪಾಲಿಕೆಯ ಸದಸ್ಯರಿಗೆ ಅಧಿಕಾರ ದೊರೆತಿರಲಿಲ್ಲ. ಕೊನೆಗೂ 2020ರ ಫೆ.28ರಂದು ಪಾಲಿಕೆಯ 32ನೇ ಮೇಯರ್ ಆಗಿ ದಿವಾಕರ ಪಾಂಡೇಶ್ವರ ಮತ್ತು ಉಪ ಮೇಯರ್ ಆಗಿ ಜಾನಕಿ ಯಾನೆ ವೇದಾವತಿ ಆಯ್ಕೆಯಾಗಿದ್ದರು.