ಮಲ್ಲೂರು: ನೂರುಲ್ ಉಲಮಾ ಅರೆಬಿಕ್ ಶಾಲೆಗೆ ಶಿಲಾನ್ಯಾಸ
ಮಂಗಳೂರು : ಭಾರತ ಸರ್ವ ಧರ್ಮೀಯರ ಸೌಹಾರ್ದ ತಾಣವಾಗಿದ್ದು, ಎಲ್ಲ ಧರ್ಮೀಯರೊಂದಿಗೆ ಅನ್ಯೋನ್ಯತೆಯಿಂದಿದ್ದು ಅಗತ್ಯ ನೆರವು, ಸಹಕಾರ ನೀಡಿ ದೇಶದ ಪರಂಪರೆ ಉಳಿಸಬೇಕು ಎಂದು ಸಮಸ್ತ ಕೇರಳ ಜಂಇಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಕರೆ ನೀಡಿದರು.
ಮಲ್ಲೂರು ದೆಮ್ಮೆಲೆ ಬದ್ರಿಯಾ ಜುಮಾ ಮಸೀದಿಯ ಆಶ್ರಯದಲ್ಲಿ ನಡೆಯಲಿರುವ ಅರೆಬಿಕ್ ಮತ್ತು ಆಂಗ್ಲಮಾಧ್ಯಮ ಶಾಲೆ, ಮಹಿಳಾ ನಮಾಝ್ ಕೋಣೆಗೆ ಶಿಲಾನ್ಯಾಸಗೈದು ಮಾತನಾಡಿದರು.
ಮನುಷ್ಯನ ಜೀವನಕ್ಕೆ ಶಿಕ್ಷಣ ಲೌಕಿಕದೊಂದಿಗೆ ಶಿಕ್ಷಣ ಧಾರ್ಮಿಕ ಶಿಕ್ಷಣವೂ ಅಗತ್ಯ. ಎರಡೂ ಶಿಕ್ಷಣ ದೊರೆತರೆ ಮಕ್ಕಳು ಯಾವುದೇ ಕಾರಣಕ್ಕೂ ಹೆತ್ತವರು, ಸಮಾಜಕ್ಕೆ ಕಂಟಕರಾಗಿ ದಾರಿ ತಪ್ಪಲು ಸಾಧ್ಯವಿಲ್ಲ. ಮಹಿಳೆ ಕುಟುಂಬ ನಿಯಂತ್ರಕರಾಗಿದ್ದು, ಮಕ್ಕಳಿಗೆ ತಾಯಿಯ ಕಾಲಡಿಯೇ ಸ್ವರ್ಗ ಎಂದು ಇಸ್ಲಾಂ ವಿಶೇಷ ಸ್ಥಾನ ನೀಡಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಸುಶಿಕ್ಷಿತರನ್ನಾಗಿಸಿ ಉತ್ತಮ ತಾಯಯಂದಿರಾಗ ಬೇಕು. ಈ ಮೂಲಕ ಮನೆ, ಪರಿಸರ, ಸಮಾಜ, ದೇಶಕ್ಕೆ ಅತ್ಯುತ್ತಮ ಪ್ರಜೆಗಳಾಗಿ ರೂಪುಗೊಳಿಸಬೇಕು ಎಂದು ಹೇಳಿದರು.
ಅಂತರಾಷ್ಟ್ರೀಯ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಮುತ್ತೇಡಂ ಮಾತನಾಡಿ, ಪರಲೋಕದಲ್ಲಿ ಹಣ, ಸಂಪತ್ತು, ಧಾರ್ಮಿಕ ಆಚರಣೆ, ಇಹಲೋಕ ಜೀವನ ಹೀಗೆ ಪ್ರತಿಯೊಂದು ವಿಚಾರದಲ್ಲೂ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡಿ ಸಮಾಜದಲ್ಲಿ ಸತ್ಪ್ರಜೆಯನ್ನಾಗಿ ರೂಪಿಸುವುದು ಹೆತ್ತವರ ಕರ್ತವ್ಯ ಎಂದು ತಿಳಿಸಿದರು.
ಫೆಡರೇಶನ್ ಆಫ್ ಕರ್ನಾಟಕ ನಿರ್ದೇಶಕ ಪಿ.ಬಿ.ಅಬ್ದುಲ್ ಹಮೀದ್, ಜಿಲ್ಲಾ ಪಂಚಾಯಿತಿ ಸದಸ್ಯ ಅನಿಲ್ ಲೋಬೋ, ಉದ್ಯಮಿಗಳಾದ ಇಸ್ಮಾಯಿಲ್, ಹೈದರ್ ಅಲಿ ಮಂಗಳೂರು, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಉಳ್ಳಾಲ, ಮುಲ್ಕಿ ಮೈಮೂನ ಫೌಂಡೇಶನ್ ಸ್ಥಾಪಕ ಮೊಹಮ್ಮದ್ ಆಸಿಫ್,ಮತ್ಸ್ಯೋದ್ಯಮಿ ಕೆ.ಇಸ್ಮಾಯಿಲ್, ಮಲ್ಲೂರು ಗಲ್ಫ್ ಗೈಯ್ಸ್ ಕೇಂದ್ರ ಸಮಿತಿ ಅಧ್ಯಕ್ಷ ಎಂ.ಜಿ.ಮೊಹಮ್ಮದ್ ಇಕ್ಬಾಲ್, ಉದ್ದಬಿಟ್ಟು ಸಯ್ಯಿದ್ ಹಸನ್ ಹೈದ್ರೋಸ್ ಜುಮ್ಮಾ ಮಸೀದಿ ಅಧ್ಯಕ್ಷ ನಿಝಾಮುದ್ದೀನ್ ಬದ್ರುದ್ದೀನ್, ನೂರುಲ್ ಉಲೂಂ ಅರಬಿಕ್ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಉಪಾಧ್ಯಕ್ಷ ಎನ್.ಇ.ಮುಹಮ್ಮದ್, ಅಲ್-ಮಸ್ಜಿದುಲ್ ಬದ್ರಿಯಾ ಅಧ್ಯಕ್ಷ ಅನ್ಸಾರುದ್ದೀನ್, ಬದ್ರಿಯಾ ಮಸೀದಿ ಅಧ್ಯಕ್ಷ ಮುಹಮ್ಮದ್ ಶರೀಫ್, ಶಾಫಿ ಸಅದಿ ಬೆಂಗಳೂರು, ಪಿ.ಬಿ.ಅಬ್ದುಲ್ ಹಮೀದ್, ಬಿಬಿಎಂಪಿ ಸದಸ್ಯ ಮುಜಾಹಿದ್ ಪಾಷಾ, ವಕ್ಫ್ ಬೋರ್ಡ್ ಸದಸ್ಯ ಯಾಕೂಬ್ ಹೊಸನಗರ, ಎಂಸಿಸಿ ಬ್ಯಾಂಕ್ ಮ್ಯಾನೇಜರ್ ಅನಿಲ್ ಲೋಬೊ, ಪುರುಷೋತ್ತಮ ಕೊಟ್ಟಾರಿ, ಅಬ್ದುಲ್ ನಾಸಿರ್, ಉದ್ಯಮಿ ಇಸ್ಮಾಯಿಲ್ ಹಾಜಿ, ಹೈದರಾಲಿ ಮಂಗಳೂರು, ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.
ಸಲೀಂ ಅಹ್ಸನಿ ಉಸ್ತಾದ್ ಸ್ವಾಗತಿಸಿದರು. ಮುಹಮ್ಮದ್ ಅಲ್ತಾಫ್ ಕಾರ್ಯಕ್ರಮ ನಿರೂಪಿಸಿದರು.