ಮಾಜಿ ಸಿಜೆಐ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣವನ್ನು ಅಂತ್ಯಗೊಳಿಸಿದ ಸುಪ್ರೀಂ ಕೋರ್ಟ್

Update: 2021-02-18 06:33 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ವಿರುದ್ಧ ಷಡ್ಯಂತ್ರದ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ಹೇಳಿ ಗೊಗೊಯಿ ವಿರುದ್ಧ ದಾಖಲಾಗಿದ್ದ ಲೈಂಗಿಕ ಕಿರುಕುಳ ಆರೋಪದ ಪ್ರಕರಣದ  ತನಿಖೆಗೆ ಸುಪ್ರೀಂ ಕೋರ್ಟ್ ಇಂದು ಅಂತ್ಯ ಹಾಡಿದೆ. ಜಸ್ಟಿಸ್ ಗೊಗೊಯಿ ಅವರು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ಕುರಿತು ಹೊಂದಿದ್ದ ಅಭಿಪ್ರಾಯ ಹಾಗೂ ಅವರು ಕೈಗೊಂಡ ಕೆಲ ನಿರ್ಧಾರಗಳಿಗೂ ಇಂತಹ ಷಡ್ಯಂತ್ರಕ್ಕೂ ನಂಟು ಇರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜಸ್ಟಿಸ್ ಗೊಗೊಯಿ ವಿರುದ್ಧದ ಆರೋಪಗಳ ಹಿಂದೆ ದೊಡ್ಡ ಷಡ್ಯಂತ್ರದ ಸಾಧ್ಯತೆ ಹಾಗೂ ನ್ಯಾಯಾಧೀಶರುಗಳನ್ನು ಸಿಕ್ಕಿಸಿ ಹಾಕುವ ಉದ್ದೇಶದಿಂದ ಅಸಂತುಷ್ಟ ಕೋರ್ಟ್ ಅಧಿಕಾರಿಗಳ ಜತೆ ಕೆಲ ಮಧ್ಯವರ್ತಿಗಳು ಕೆಲಸ ಮಾಡಿರುವ ಸಾಧ್ಯತೆ ಕುರಿತು ತನಿಖೆ ನಡೆಸಲು ಸೂಚಿಸಲಾಗಿದ್ದ ಮಾಜಿ ನ್ಯಾಯಮೂರ್ತಿ ಎ ಕೆ ಪಟ್ನಾಯಕ್ ಅವರ ವರದಿಯ ಆಧಾರದಲ್ಲಿ ಇಂದಿನ ಕೋರ್ಟ್ ತೀರ್ಪು ಬಂದಿದೆ.

"ಮಾಜಿ ಸಿಜೆಐ ವಿರುದ್ಧ ಷಡ್ಯಂತ್ರವಿತ್ತು ಹಾಗೂ ಅದರ ಸಾಧ್ಯತೆಯನ್ನು ತಳ್ಳಿ ಹಾಕಲಾಗದು ಎಂದು ಜಸ್ಟಿಸ್ ಪಟ್ನಾಯಕ್ ವರದಿ ಹೇಳಿದೆ" ಎಂದು  ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸಮಿತಿ ಯಾವುದೇ ಇಲೆಕ್ಟ್ರಾನಿಕ್ ದಾಖಲೆಗಳನ್ನು ಪಡೆಯುವುದು ಸಾಧ್ಯವಾಗಿಲ್ಲ ಎಂದೂ ತಿಳಿಸಿದೆ.

ಜಸ್ಟಿಸ್ ಗೊಗೊಯಿ ಅವರು ಎನ್‍ಆರ್ಸಿ ಕುರಿತ ಪ್ರಕರಣಗಳಲ್ಲಿ ಗಂಭೀರ ನಿಲುವು ತಾಳಿದ್ದರಿಂದ ಕೆಲವರು ಈ ನಿರ್ಧಾರದಿಂದ ಅಸಂತುಷ್ಟರಾಗಿದ್ದಾರೆಂಬುದಕ್ಕೆ ಬಲವಾದ ಕಾರಣಗಳಿವೆ ಎಂದು ಗುಪ್ತಚರ ದಳದ ನಿರ್ದೇಶಕರು ತಮ್ಮ ವರದಿಯಲ್ಲಿ ಹೇಳಿದ್ದರು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣವನ್ನು ಅಂತ್ಯಗೊಳಿಸಿದ ಸುಪ್ರೀಂ ಕೋರ್ಟ್, "ಯಾವುದೇ ಉದ್ದೇಶ  ಈಡೇರಿಸುವುದು ಸಾಧ್ಯವಾಗಿಲ್ಲ. ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಲೇವಾರಿಗೊಳಿಸಲಾಗಿದೆ. ವರದಿಯನ್ನು ಸೀಲ್ಡ್ ಕವರ್‍ನಲ್ಲಿ ಹಾಕಲಾಗಿದೆ" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News