ದೇಶಾದ್ಯಂತ ರೈತರ ರೈಲ್ ರೋಕೊ ಆರಂಭ, ಭದ್ರತೆ ಹೆಚ್ಚಿಸಿದ ರೈಲ್ವೆ

Update: 2021-02-18 18:48 GMT

 ಹೊಸದಿಲ್ಲಿ,ಫೆ.18: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಇಂದು ದೇಶಾದ್ಯಂತ ರೈಲು ತಡೆ ಪ್ರತಿಭಟನೆಯನ್ನು ನಡೆಸಿದ್ದು,ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಸ್ಥಳಗಳಲ್ಲಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಹಲವು ಕಡೆಗಳಲ್ಲಿ ಪ್ರತಿಭಟನಾನಿರತ ರೈತರು ರೈಲು ಹಳಿಗಳ ಮೇಲೆ ಕುಳಿತುಕೊಂಡಿದ್ದು,ರೈಲ್ವೆ ಮತ್ತು ರಾಜ್ಯ ಪೊಲೀಸರ ನಿಯೋಜನೆಯೊಂದಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪಂಜಾಬ,ಹರ್ಯಾಣ,ಉತ್ತರ ಪ್ರದೇಶ,ಬಿಹಾರ,ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ದೇಶಾದ್ಯಂತ ರೈಲು ತಡೆಗಳು ನಡೆದಿವೆ. ಪಂಜಾಬಿನಲ್ಲಿ ಜಲಂಧರ ಮತ್ತು ಮೊಹಾಲಿಗಳಲ್ಲಿ ರೈಲು ಹಳಿಗಳಲ್ಲಿ ತಡೆಗಳನ್ನೊಡ್ಡಿದ್ದ ಪ್ರತಿಭಟನಾಕಾರರು ದಿಲ್ಲಿ-ಲುಧಿಯಾನ-ಅಮೃತಸರ ಮಾರ್ಗದಲ್ಲಿಯೂ ರೈಲುಗಳ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಹರ್ಯಾಣದಲ್ಲಿ ಕುರುಕ್ಷೇತ್ರ,ಅಂಬಾಲಾ,ಪಂಚಕುಲಾ,ಪಾನಿಪತ್ ಮತ್ತು ಫತೇಹಾಬಾದ್ ಜಿಲ್ಲೆಗಳು ಸೇರಿದಂತೆ ಹಲವೆಡೆಗಳಲ್ಲಿ ಮಹಿಳೆಯರೂ ಒಳಗೊಂಡಂತೆ ಪ್ರತಿಭಟನಾನಿರತ ರೈತರು ರೈಲು ಹಳಿಗಳ ಮೇಲೆ ಕುಳಿತುಕೊಂಡಿದ್ದರು.

ಕರ್ನಾಟಕದಲ್ಲಿ ರೈತರು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಪ್ರತಿಭಟನೆಯನ್ನು ನಡೆಸಿದರು. ನಾವು ರೈಲ್ವೆ ನಿಲ್ದಾಣಕ್ಕೆ ಬಂದಾಗ ರೈಲು ತಡೆಯನ್ನು ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ತಿಳಿಸಿದ ರೈತನಾಯಕರೋರ್ವರು,ರೈತ ಸಂಘಟನೆಗಳು ದೇಶಾದ್ಯಂತ ರೈಲು ತಡೆಯನ್ನು ಘೋಷಿಸಿರುವಾಗ ಪೊಲೀಸರ ಅನುಮತಿಗೇಕೆ ನಾವು ಕಾಯಬೇಕು ಎಂದು ಪ್ರಶ್ನಿಸಿದರು.

ಅತ್ತ ಪಟ್ನಾದ ರೈಲು ನಿಲ್ದಾಣದಲ್ಲಿ ರೈತರನ್ನು ಬೆಂಬಲಿಸಿ ಜನ ಅಧಿಕಾರ ಪಾರ್ಟಿ(ಲೋಕತಾಂತ್ರಿಕ)ಯ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು.

ಮಹಾರಾಷ್ಟ್ರದ ಡಹಾಣು,ಔರಂಗಾಬಾದ್  ಮತ್ತು ಪರ್ಭನಿ ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ನಡೆಸಿದರು. ಆದರೆ ಹಲವಾರು ಪ್ರತಿಭಟನಾಕಾರರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು,ಸ್ಥಳೀಯ ರೈಲುಗಳ ಸಂಚಾರಕ್ಕೆ ಹೆಚ್ಚಿನ ವ್ಯತ್ಯಯವುಂಟಾಗಲಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News