×
Ad

ಫೆ.19-28: ‘ಸುದೃಢ ಕುಟುಂಬ-ಸುಭದ್ರ ಸಮಾಜ’ಕ್ಕಾಗಿ ರಾಷ್ಟ್ರೀಯ ಅಭಿಯಾನ

Update: 2021-02-18 13:32 IST

ಮಂಗಳೂರು, ಫೆ.18: ಪ್ರಚಲಿತ ಸಾಮಾಜಿಕ ಪರಿಸ್ಥಿತಿಯ ಅಧ್ಯಯನದಿಂದ ಸಮಾಜದ ಮೂಲಭೂತ ಘಟಕವಾಗಿರುವ ಕುಟುಂಬವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡು ಬರುತ್ತಿದೆ. ನಿರಂತರವಾಗಿ ಬೆಳೆಯುತ್ತಿರುವ ಭೌತಿಕವಾದವು ಕುಟುಂಬದ ಬುನಾದಿಯನ್ನೇ ಅಲುಗಾಡಿಸುತ್ತಿದೆ. ಕುಟುಂಬದ ಸದಸ್ಯರ ಮಧ್ಯೆ ಪರಸ್ಪರ ಗೌರವ, ಕಾಳಜಿ ಕಡಿಮೆಯಾಗುತ್ತಿದೆ. ಗೃಹ ಹಿಂಸೆಯು ಭಾರೀ ಪ್ರಮಾಣದಲ್ಲಿ ಹೆಚ್ಚಿರುವುದು ಲಾಕ್‌ಡೌನ್ ಸಂದರ್ಭ ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಫೆ.19ರಿಂದ 28ರವರೆಗೆ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ‘ಸುದೃಢ ಕುಟುಂಬ-ಸುಭದ್ರ ಸಮಾಜ’ಕ್ಕಾಗಿ ರಾಷ್ಟ್ರೀಯ ಅಭಿಯಾನವನ್ನು ಆಯೋಜಿಸಿದೆ ಎಂದು ಅನುಪಮ ಮಾಸಿಕದ ಉಪಸಂಪಾದಕಿ ಸಬೀಹಾ ಫಾತಿಮಾ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮನೆಯಲ್ಲಿರಿ, ಸುರಕ್ಷಿತವಾಗಿರಿ’ ಎಂಬ ಘೋಷಣೆಯು ಪೊಳ್ಳಾಗುತ್ತಿವೆ. ಸಮೀಕ್ಷೆಯೊಂದರ ಪ್ರಕಾರ ಗೃಹ ಹಿಂಸೆಯು ಕಳೆದ 10 ವರ್ಷಗಳಲ್ಲೇ ಇದೀಗ ಅಧಿಕವಾಗುತ್ತಿದೆ. ವಿವಾಹ ವಿಚ್ಛೇದನೆ ಮತ್ತು ಕುಟುಂಬ ವ್ಯಾಜ್ಯಗಳ ಸಂಖ್ಯೆಯು ಹೆಚ್ಚುತ್ತಿವೆ. ದೌರ್ಜನ್ಯಕ್ಕೊಳಗಾದವರ ಪೈಕಿ ಕೇವಲ ಶೇ.7ರಷ್ಟು ಮಂದಿ ಮಾತ್ರ ಆಡಳಿತ ವ್ಯವಸ್ಥೆಯ ನೆರವು ಪಡೆಯುತ್ತಿದ್ದಾರೆ. ಮಹಿಳೆಯರಲ್ಲದೆ ಎಳೆಯ ಮಕ್ಕಳು, ಯುವ ಜನರು, ಹಿರಿಯ ನಾಗರಿಕರೂ ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗೇ ಯುವ ಜನರು ಮದುವೆ ಮತ್ತು ಕೌಟುಂಬಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಮಾತೃತ್ವ ಅಥವಾ ಪಿತೃತ್ವದ ಹೊಣೆಗಾರಿಕೆಯನ್ನು ವಹಿಸಲು ನಿರಾಕರಿಸುತ್ತಿದ್ದಾರೆ. ಲಿವ್ ಇನ್ ಸಂಬಂಧಗಳು, ಭ್ರೂಣಹತ್ಯೆ ಪ್ರಕರಣ ಮಿತಿ ಮೀರುತ್ತಿವೆ. ಕುಟುಂಬದ ಮೂಲಸ್ಥಿತಿಯನ್ನು ಪುನಃ ಸ್ಥಾಪಿಸುವ ಅಗತ್ಯವಿದೆ. ಅದಕ್ಕಾಗಿ ‘ಸುದೃಢ ಕುಟುಂಬ-ಸುಭದ್ರ ಸಮಾಜ’ಕ್ಕಾಗಿ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ನರ್ ಮೀಟಿಂಗ್, ಕುಟುಂಬ ಸಭೆಗಳು, ಸ್ಪರ್ಧೆಗಳು, ಫ್ಯಾಮಿಲಿ ಕ್ವಿಝ್, ಅಂತರ್‌ಧರ್ಮೀಯ ಸಂಬಂಧಗಳು, ಅಂತರ್‌ರಾಷ್ಟ್ರೀಯ ವೆಬಿನಾರ್, ಫ್ಯಾಮಿಲಿ ಕೌನ್ಸಿಲಿಂಗ್, ವಕೀಲರೊಂದಿಗೆ ಚಾವಡಿ ಚರ್ಚೆ, ತಜ್ಞರೊಂದಿಗೆ ಆನ್‌ಲೈನ್ ಚರ್ಚೆ, ಜುಮಾ ಖುತ್ಬಾ, ಗುಂಪು ಚರ್ಚೆ ಇತ್ಯಾದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ನಾಯಕರಿಗೆ, ಮಸೀದಿಯ ಇಮಾಮರಿಗೆ, ವಿದ್ವಾಂಸರಿಗೆ ಪತ್ರ ಬರೆದು ಗಮನ ಸೆಳೆಯಲಾಗುವುದು. ಮಂಗಳೂರು ನಗರ ಸಹಿತ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲೂ ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಬೀಹಾ ಫಾತಿಮಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ದ.ಕ.ಜಿಲ್ಲಾ ಸಂಚಾಲಕಿ ಸಮೀನಾ ಉಪ್ಪಿನಂಗಡಿ, ರಾಜ್ಯ ಸಮಿತಿಯ ಸದಸ್ಯೆ ಮರಿಯಮ್ ಶಹೀರಾ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್‌ನ ರಾಜ್ಯಾಧ್ಯಕ್ಷ ಹುಮೇರಾ ಬಾನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News