ಪಾಂಡೇಶ್ವರ ರೈಲ್ವೆ ಗೇಟ್ ಜಾಮ್ : ಪರದಾಡಿದ ವಾಹನಿಗರು
ಮಂಗಳೂರು, ಫೆ.18: ನಗರದ ಹೃದಯ ಭಾಗವಾದ ಪಾಂಡೇಶ್ವರ ರೈಲ್ವೆ ಗೇಟ್ ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಗಳ ಕಾಲ ಜಾಮ್ ಆದ ಪರಿಣಾಮ ವಾಹನಿಗರು ಪರದಾಡುವಂತಾಯಿತು.
ಈ ರೈಲ್ವೆ ಹಳಿಯಲ್ಲಿ ಗೂಡ್ಸ್ ರೈಲು ಚಲಿಸುತ್ತಿದ್ದು, ಮಧ್ಯಾಹ್ನ ಸುಮಾರು 12:15ಕ್ಕೆ ರೈಲ್ವೆ ಗೇಟ್ ಜಾಮ್ ಆಯಿತು. ತೊಕ್ಕೊಟ್ಟು, ಜಪ್ಪಿನಮೊಗರು ಪ್ರದೇಶದ ಜನರು ಮಂಗಳೂರಿಗೆ ಬರಲು ಅಥವಾ ಮಂಗಳೂರಿನಿಂದ ಈ ಭಾಗಕ್ಕೆ ತೆರಳಲು ಪಾಂಡೇಶ್ವರ ರಸ್ತೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.
ರೈಲ್ವೆ ಗೇಟ್ ಜಾಮ್ ಆದ ಕಾರಣ ಈ ರಸ್ತೆಯ ಎರಡೂ ಕಡೆಯಲ್ಲಿ ಬಂದು ನಿಂತಿದ್ದ ವಾಹನಿಗರು ಅತ್ತಿಂದಿತ್ತ ಹೋಗಲಾಗದೆ ಪರದಾಡಿದ್ದಾರೆ. ಅಲ್ಲದೆ ತುರ್ತಾಗಿ ಹೋಗುವವರು ಭಾರೀ ಸಮಸ್ಯೆ ಎದುರಿಸುವಂತಾಯಿತು. ಬಹುತೇಕ ಮಂದಿ ಹೊಯಿಗೆ ಬಝಾರ್ ಮತ್ತಿತರ ರಸ್ತೆಯ ಮೂಲಕ ಚಲಿಸುವಂತಾಯಿತು. ಜಾಮ್ ಆದ ರೈಲ್ವೆ ಗೇಟ್ ಸರಿಪಡಿಸಲು ಸಿಬ್ಬಂದಿಗಳು ಹರಸಾಹಸಪಟ್ಟರು.
ಈ ಬಗ್ಗೆ ಪ್ರತಿಕ್ರಿಯಿಸಿದ ಡಬ್ಲುಪಿಐ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಾಮಾಜಿಕ ಕಾರ್ಯಕರ್ತ ಮುತ್ತಲಿಬ್ ಎಸ್‌ಎಂ ‘ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ, ಸಂಸದರಿಗೆ, ಶಾಸಕರಿಗೆ ಅನೇಕ ಮನವಿಗಳನ್ನು ಸಲ್ಲಿಸಿದ್ದೇವೆ. ಆದರೆ ಇನ್ನೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿವರೆಗೂ ಹಠಾತ್ ಆಗಿ ಗೇಟ್ ಹಾಕಿ ಸಂಚಾರಕ್ಕೆ ತಡೆಯೊಡ್ಡಲಾಗುತ್ತದೆ. ಹಾಗಾಗಿ ಈ ರಸ್ತೆಯಾಗಿ ಹೋಗುವವರಿಗೆ ಸಮಸ್ಯೆ ತಪ್ಪಿದ್ದಲ್ಲ. ನಿಗದಿತ ಸಮಯವಿಲ್ಲದ ಕಾರಣ ತುರ್ತಾಗಿ ಬರುವವರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ’ ಎಂದು ತಿಳಿಸಿದ್ದಾರೆ.