ಬ್ರಹ್ಮಾವರ : ನಾಪತ್ತೆಯಾಗಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ಆತ್ಮಹತ್ಯೆ

Update: 2021-02-18 16:19 GMT

ಬ್ರಹ್ಮಾವರ, ಫೆ.18: ಬುಧವಾರ ನಾಪತ್ತೆಯಾಗಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಅಂಬಲಪಾಡಿಯ ಪದ್ಮನಾಭ ಭಂಡಾರಿ (63) ಎಂಬವರ ಮೃತದೇಹ ಇಂದು ಬ್ರಹ್ಮಾವರ ತಾಲೂಕು ಹಾವಂಜೆ ಗ್ರಾಮದ ಇರ್ಮಾಡಿ ಶೇಡಿಗುಳಿ ವನ್ಯಜೀವಿ ಮೀಸಲು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.

ಭಂಡಾರಿ ಅವರು ಅರಣ್ಯ ಪ್ರದೇಶದಲ್ಲಿರುವ ಅಕೇಶಿಯಾ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಬುಧವಾರ ಬೆಳಗ್ಗೆ 11:45ರಿಂದ ಅವರು ನಾಪತ್ತೆಯಾಗಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಭಂಡಾರಿ ಅವರು ಮನೆಯಿಂದ 11:45ರ ಸುಮಾರಿಗೆ ತನ್ನ ಕಾರಿನಲ್ಲಿ ಅಣ್ಣನ ಅಂಗಡಿಗೆ ಬಂದು ಹೋಗಿದ್ದು, ಅನಂತರ ನಾಪತ್ತೆಯಾಗಿದ್ದರು. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿಯಾಗಿರುವ ಭಂಡಾರಿ ಅಂಬಲಪಾಡಿಯಲ್ಲಿ ವಾಸವಾಗಿದ್ದು, ಹೃದಯ ಸಂಬಂಧಿ ಹಾಗೂ ಮೂತ್ರಕೋಶದ ಕಾಯಿಲೆಯಿಂದ ಬಳಲುತಿದ್ದರು. ಇದರಿಂದ ತುಂಬಾ ಚಿಂತಿತರಾದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ.

ಅವರು ಕಾರಿನಲ್ಲಿ ಹಾವಂಜೆ ಗ್ರಾಮದ ಇರ್ಮಾಡಿ ಶೇಡಿಗುಳಿಗೆ ಬಂದು, ಕಾರನ್ನು ನಿಲ್ಲಿಸಿ ವನ್ಯಜೀವಿ ಮೀಸಲು ಅರಣ್ಯದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News