ರೈತರ ಪ್ರತಿಭಟನೆಯ ಪರಿಣಾಮ: ಪಂಜಾಬ್,ಹರ್ಯಾಣದಲ್ಲಿ ನೆಲಕಚ್ಚುತ್ತಿರುವ ‘ಜಿಯೋ’

Update: 2021-02-19 07:05 GMT

ಹೊಸದಿಲ್ಲಿ: ಭಾರತದ ಅತಿದೊಡ್ಡ ಟೆಲಿಕಾಮ್ ಆಪರೇಟರ್ ರಿಲಯನ್ಸ್ ಜಿಯೋದ ವೈರ್ ಲೆಸ್ ಚಂದಾದಾರರ ಸಂಖ್ಯೆ 2020ರ ಡಿಸೆಂಬರ್ ನಲ್ಲಿ ಪಂಜಾಬ್ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಇಳಿಕೆ ಕಂಡಿದೆ. ಕೃಷಿ ಕಾನೂನುಗಳ ವಿರುದ್ಧ ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದಾಗಿ  ರಿಲಯನ್ಸ್ ಜಿಯೋದ ಮಾತೃಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎದುರಿಸುತ್ತಿರುವ ಹಿನ್ನಡೆಯ ಸಂಭವನೀಯ ಫಲಿತಾಂಶ ಇದಾಗಿದೆ. 

ಟೆಲಿಕಾಮ್ ರೆಗ್ಯುಲೇಟರಿ ಅಥಾರಿಜಿ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಡಿಸೆಂಬರ್ 2020ರ ಅಂಕಿ-ಅಂಶಗಳ ಪ್ರಕಾರ ಪಂಜಾಬ್ ಹಾಗೂ ಹರ್ಯಾಣದಲ್ಲಿ ಮಾತ್ರ ರಿಲಯನ್ಸ್ ಜಿಯೋ ತಿಂಗಳಲ್ಲಿ ಚಂದಾದಾರರನ್ನು ಕಳೆದುಕೊಂಡಿರುವ ಎರಡು ರಾಜ್ಯಗಳಾಗಿವೆ. ಅಲ್ಲದೆ ಡಿಸೆಂಬರ್ ಅವಧಿಯಲ್ಲಿ ಈ ಎರಡು ರಾಜ್ಯಗಳಲ್ಲಿ ತನ್ನ ಚಂದಾದಾರರನ್ನು ಕಳೆದುಕೊಂಡ ಏಕೈಕ ಪ್ರಮುಖ ಟೆಲಿಕಾಮ್ ಆಪರೇಟರ್ ಜಿಯೋ.

ಪಂಜಾಬ್ ನಲ್ಲಿ ಜಿಯೋ ಡಿಸೆಂಬರ್ ಅಂತ್ಯದ ವೇಳೆಗೆ 1.25 ಕೋಟಿ ಚಂದಾದಾರರನ್ನು ಹೊಂದಿದ್ದು, ಹಿಂದಿನ 18 ತಿಂಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ. ಜಿಯೊ ಎರಡನೇ ಬಾರಿ ರಾಜ್ಯದಲ್ಲಿ ನೆಟ್ ಆಧಾರದಲ್ಲಿ ಚಂದಾದಾರರನ್ನು ಕಳೆದುಕೊಂಡಿದೆ. 2019ರ ಡಿಸೆಂಬರ್ ನಲ್ಲಿ ಜಿಯೋ ಚಂದಾದಾರರನ್ನು ಕಳೆದುಕೊಂಡಿತ್ತು.  ಸರಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಹೊರತುಪಡಿಸಿ ಎಲ್ಲ   ಪ್ರಮುಖ ಟೆಲಿಕಾಮ್ ಕಂಪೆನಿಗಳು ಪಂಜಾಬ್ ವಲಯದಲ್ಲಿ ಚಂದಾದಾರರ ಕುಸಿತವನ್ನು ದಾಖಲಿಸಿವೆ.

ಹರ್ಯಾಣದಲ್ಲಿ ಜಿಯೋ ವೈರ್ ಲೆಸ್ ಚಂದಾದಾರರ ಸಂಖ್ಯೆಯು 2020ರ ನವೆಂಬರ್ ನಲ್ಲಿ 94.48 ಲಕ್ಷದಿಂದ ಡಿಸೆಂಬರ್ 2020ರಲ್ಲಿ 89.07ಲಕ್ಷಕ್ಕೆ ಕುಸಿದಿದೆ. 2016ರಲ್ಲಿ ತನ್ನ ವ್ಯವಹಾರ ಆರಂಭಿಸಿದ ನಂತರ ಜಿಯೋ ಕಂಪೆನಿಯು ಹರ್ಯಾಣದಲ್ಲಿ ಇಳಿಕೆ ಕಂಡಿದೆ.

ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳು ಅಂಗೀಕಾರವಾದ ಬಳಿಕ ನವೆಂಬರ್ ಅಂತ್ಯದಿಂದ ದಿಲ್ಲಿಯ ಹೊರಭಾಗಗಳಲ್ಲಿ ರೈತರ ಪ್ರತಿಭಟನೆ ಆರಂಭವಾಗಿತ್ತು. ಸ್ವಲ್ಪ ಸಮಯದ ನಂತರ ಜಿಯೋ ಪೋರ್ಟ್-ಔಟ್ ಸ್ವೀಕರಿಸಲು ಆರಂಭಿಸಿತು. ತನ್ನ ಪ್ರತಿಸ್ಪರ್ಧಿಗಳಾದ ಏರ್ ಟೆಲ್ ಹಾಗೂ ವೊಡಾಫೋನ್ ಐಡಿಯಾವು ‘ದುರುದ್ದೇಶಪೂರಿತ’ ಅಭಿಯಾನವನ್ನು ನಡೆಸುತ್ತಿವೆ ಎಂದು ದೂರಸಂಪರ್ಕ ನಿಯಂತ್ರಕರಿಗೆ ಪತ್ರ ಬರೆದು ಜಿಯೋ ದೂರು ನೀಡಿತ್ತು. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News