ಮಂಗಳನ ಅಂಗಳಕ್ಕೆ ಪರ್ಸೀವರೆನ್ಸ್ ರೋವರ್

Update: 2021-02-19 08:33 GMT
 (Photo - NASA)

ವಾಷಿಂಗ್ಟನ್ : ಏಳು ತಿಂಗಳ ಕಾಲ ಬಾಹ್ಯಾಕಾಶದಲ್ಲಿದ್ದ ನಾಸಾದ ಪರ್ಸೀವರೆನ್ಸ್ ರೋವರ್ ಮಂಗಳ ಗ್ರಹದ ಮೇಲ್ಮೈ ಮೇಲೆ ಯಶಸ್ವಿಯಾಗಿ ಗುರುವಾರ ಇಳಿದಿದೆ. ಮಂಗಳನ ಅಂಗಳದಲ್ಲಿ ಪ್ರಾಚೀನ ಸೂಕ್ಷ್ಮ ಜೀವಿಗಳು ಬದುಕಿದ್ದ ಕುರುಹುಗಳ ಶೋಧ ಕಾರ್ಯವನ್ನು ರೋವರ್ ಕೈಗೊಳ್ಳಲಿದೆ.

"ಮಂಗಳನ ಅಂಗಳವನ್ನು ಸ್ಪರ್ಶಿಸಿರುವುದು ದೃಢಪಟ್ಟಿದೆ" ಎಂದು ಕಾರ್ಯಾಚರಣೆ ಮುಖ್ಯಸ್ಥೆ ಸ್ವಾತಿ ಮೋಹನ್ ಹೇಳಿಕೆ ನೀಡುತ್ತಿದ್ದಂತೆಯೇ ಪಸಡೇನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಸಂಭ್ರಮದ ವಾತಾವರಣ ಕಂಡುಬಂತು.

ಸಂಪೂರ್ಣ ಸ್ವಯಂ ನಿರ್ದೇಶಿತ ಪ್ರಕ್ರಿಯೆ 11 ನಿಮಿಷ ಮುಂಚಿತವಾಗಿಯೇ ಮುಕ್ತಾಯವಾಗಿದೆ. ನಾಸಾದ ಸಹ ಆಡಳಿತಾಧಿಕಾರಿ ಥಾಮಸ್ ಝುರ್ಬಚೆನ್ 'ವ್ಹಾವ್!' ಎಂಬ ಉದ್ಗಾರದ ಟ್ವೀಟ್ ಮಾಡಿದ್ದಾರೆ. ಮಂಗಳನ ಉತ್ತರ ಧ್ರುವದ ಜೆಝೀರೊ ಕಾರ್ಟರ್‌ನಿಂದ ಪರ್ಸೀವರೆನ್ಸ್ ‌ನ ಮೊಟ್ಟಮೊದಲ ಕಪ್ಪು ಬಿಳುಪು ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ.

ಹಲವು ವರ್ಷಗಳ ತನ್ನ ಕಾರ್ಯಾಚರಣೆಯಲ್ಲಿ 30 ಶಿಲೆ ಮತ್ತು ಮಣ್ಣು ಮಾದರಿಯನ್ನು ಮುಚ್ಚಿದ ಕೊಳವೆಗಳಲ್ಲಿ ಸಂಗ್ರಹಿಸುವ ಪ್ರಯತ್ನ ಮಾಡಲಿದೆ. ಇದನ್ನು ಕ್ರಮೇಣ ಅಂದರೆ 2030ರ ವೇಳೆಗೆ ಪ್ರಯೋಗಾಲಯ ವಿಶ್ಲೇಷಣೆಗಾಗಿ ಭೂಮಿಗೆ ವಾಪಾಸು ಕಳುಹಿಸಲಿದೆ.
ಎಸ್‌ಯುವಿ ಗಾತ್ರದ ಈ ರೋವರ್ ಒಂದು ಟನ್ ತೂಕ ಹೊಂದಿದ್ದು, ಏಳು ಅಡಿ ಉದ್ದದ ರೋಬೋಟಿಕ್ ಆರ್ಮ್, 19 ಕ್ಯಾಮೆರಾ, ಎರಡು ಮೈಕ್ರೋಫೋನ್ ಮತ್ತು ತನ್ನ ವೈಜ್ಞಾನಿಕ ಗುರಿಗಳಿಗೆ ನೆರವಾಗುವ ಅತ್ಯಾಧುನಿಕ ಸಾಧನಗಳಿಂದ ಸುಸಜ್ಜಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News