ಉನ್ನಾವೋ ಪ್ರಕರಣ: ಮೃತ ಬಾಲಕಿಯರ ದೇಹಗಳಲ್ಲಿ ಗಾಯದ ಕಲೆಗಳಿಲ್ಲ, ವಿಷಪ್ರಾಶನ ಶಂಕೆ: ಪೊಲೀಸರ ಹೇಳಿಕೆ

Update: 2021-02-19 08:57 GMT
photo: indianexpress

 ಲಕ್ನೋ: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಗ್ರಾಮದಲ್ಲಿ ಕುಟುಂಬದ ಗದ್ದೆಯಲ್ಲಿ ಪತ್ತೆಯಾದ ಇಬ್ಬರು ದಲಿತ ಬಾಲಕಿಯರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು 13 ಹಾಗೂ 16 ವರ್ಷದ ಬಾಲಕಿಯರ ದೇಹಗಳಲ್ಲಿ ಯಾವುದೇ ಗಾಯದ ಗುರುತುಗಳಿಲ್ಲವೆಂದು ಮರಣೋತ್ತರ ವರದಿ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಗದ್ದೆಯಲ್ಲಿ ಗಂಭೀರಾವಸ್ಥೆಯಲ್ಲಿ ಪತ್ತೆಯಾದ ಇನ್ನೊಬ್ಬಳು ಹುಡುಗಿಗೆ  ಚಿಕಿತ್ಸೆ ನೀಡಲಾಗುತ್ತಿದ್ದು ವಿಷಪ್ರಾಶನಗೈದಿರುವ ಸಾಧ್ಯತೆಯಿರುವುದರಿಂದ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ಬಾಲಕಿಯರ ಮೇಲೆ ಲೈಂಗಿಕ ಹಲ್ಲೆ ನಡೆದಿರುವುದಕ್ಕೂ ಯಾವುದೇ ಆಧಾರವಿಲ್ಲ ಎಂದು ಹೇಳಿರುವ ಪೊಲೀಸರು ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದು ಮರ್ಯಾದಾ ಹತ್ಯೆ ಅಥವಾ ಆತ್ಮಹತ್ಯೆಯೂ ಆಗಿರಬಹುದು ಎಂದು ಹೇಳಲಾಗಿದೆ.

ಬಾಲಕಿಯರ ದೇಹಗಳು ಗದ್ದೆಯಲ್ಲಿ ಪತ್ತೆಯಾದಾಕ್ಷಣ ಕುಟುಂಬ ಪೊಲೀಸರಿಗೆ ಏಕೆ ಕರೆ ಮಾಡಿಲ್ಲ ಎಂದೂ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.

ಸೋದರ ಸಂಬಂಧಿಯರಾದ ಬಾಲಕಿಯರು ಪತ್ತೆಯಾದ ಗದ್ದೆ ಅವರ ಮನೆಗಳಿಂದ ಸುಮಾರು 800 ಮೀಟರ್ ದೂರವಿದ್ದು. ಎಂದಿನಂತೆ ಪಶುಗಳಿಗೆ ಮೇವು ಸಂಗ್ರಹಿಸಲು ಅವರು ತೆರಳಿದ್ದರು ಸಂಜೆಯಾದಾಗಾಲೂ ಅವರು ಬಾರದೇ ಇದ್ದಾಗ ಅವರಿಗಾಗಿ ಶೋಧಿಸಿದಾಗ  ಅವರು ಗದ್ದೆಯಲ್ಲಿ ಪತ್ತೆಯಾಗಿದ್ದರು. ಅವರ ಕೈಗಳನ್ನು ಕುತ್ತಿಗೆಗೆ ಅವರ ಚುನ್ನಿ (ಶಾಲು) ಬಳಸಿ ಕಟ್ಟಲಾಗಿದ್ದನ್ನು ನೋಡಿದ್ದೇನೆ ಎಂದು ಬಾಲಕಿಯೊಬ್ಬಳ ತಾಯಿ ಹೇಳಿದ್ದಾರೆ.

ಬಾಲಕಿಯರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದು  ಬದುಕುಳಿದವಳನ್ನು ಆಸ್ಪತ್ರೆಗೆ ತಂದಾಗ ಆಕೆ ಏದುಸಿರು ಬಿಡುತ್ತಿದ್ದಳು ಹಾಗೂ ಬಾಯಿಯಲ್ಲಿ ನೊರೆಯಿತ್ತು ಎಂದು ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News