'ಫೆ.22ರಿಂದ ಬಿಜೆಪಿ ನೇತೃತ್ವದ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ'
ಉಡುಪಿ, ಫೆ.19:ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸಲು ಉಡುಪಿ ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿಯ ಸಹಯೋಗದೊಂದಿಗೆ ಇದೇ ಫೆ.22ರಿಂದ 27ರವರೆಗೆ ಜಿಲ್ಲೆಯ ದಕ್ಷಿಣ ತುದಿಯಾದ ಹೆಜಮಾಡಿಯಿಂದ ಉತ್ತರದ ತುದಿಯಾದ ಬೈಂದೂರು ಶಿರೂರುವರೆಗೆ ‘ಜನಧ್ವನಿ’ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಕೊಡವೂರು, ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ರಾಜ್ಯದ ಪ್ರಮುಖ ನಾಯಕರುಗಳು ಈ ಪಾದ ಯಾತ್ರೆ ಯಲ್ಲಿ ಭಾಗವಹಿಸಲಿದ್ದಾರೆ ಎಂದರು.
‘ಜನಧ್ವನಿ’ ಪಾದಯಾತ್ರೆಯು ಫೆ.22ರ ಸೋಮವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆ ಗೊಳ್ಳಲಿದೆ. ಫೆ.27ರ ಶನಿವಾರ ಅಪರಾಹ್ನ 3:00 ಗಂಟೆಗೆ ಬೈಂದೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನದ ಪಾದಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಜಿಲ್ಲಾ ಮುಖಂಡರು ಭಾಗವಹಿ ಸುವರು ಎಂದು ಅಶೋಕ್ ಕುಮಾರ್ ಕೊಡವೂರು ತಿಳಿಸಿದರು.
ಈ ಪಾದಯಾತ್ರೆಯು ಹೆಜಮಾಡಿ ಟೋಲ್‌ಗೇಟ್ ಬಳಿಯಿಂದ ಪ್ರಾರಂಭಗೊಂಡು ಕಾಪು- ಕಟಪಾಡಿ- ಉಡುಪಿ- ಕಲ್ಯಾಣಪುರ ಸಂತೆಕಟ್ಟೆ- ಬ್ರಹ್ಮಾವರ- ಕುಂದಾಪುರ- ಅರೆಹೊಳೆ ಮೂಲಕ ಒಟ್ಟು 108 ಕಿ.ಮೀ. ಪಾದಯಾತ್ರೆ ಬೈಂದೂರಿನಲ್ಲಿ ಸಮಾಪನಗೊಳ್ಳಲಿದೆ ಎಂದರು.
ಪಾದಯಾತ್ರೆಯ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಂದಿರುವ ರೈತ ವಿರೋಧಿ ನೀತಿಗಳಾದ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳ ಕುರಿತು ಜನಜಾಗೃತಿ ಮೂಡಿಸಲಾಗುವುದು. ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲೆ ಸರಕಾರ ಹೇರಿದ ಸೆಸ್‌ನಿಂದ ತೈಲಬೆಲೆ ಏರಿಕೆಗೊಂಡು ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ಶ್ರೀಸಾಮಾನ್ಯನ ನಿತ್ಯದ ಬದುಕು ಸಂಕಷ್ಟಕ್ಕೆ ಸಿಲುಕುವ ಕುರಿತು ಜನರ ಗಮನ ಸೆಳೆಯಲಾಗುವುದು ಎಂದು ಅವರು ಹೇಳಿದರು.
ಅಲ್ಲದೇ ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಪ್ರಾರಂಭಿಸಿದ ಹಲವಾರು ಸರಕಾರಿ ಸಾಮ್ಯದ ಸಂಸ್ಥೆಗಳ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಖಾಸಗಿಗೆ ಮಾರಾಟ ಮಾಡುತಿದೆ. ಎಲ್ಲೈಸಿ, ರೈಲ್ವೆ, ವಿಮಾನ, ಬೆಮೆಲ್, ಬ್ಯಾಂಕುಗಳ ಸೇರಿದಂತೆ ನೂರಕ್ಕೂ ಅಧಿಕ ಸರ ಕಾರಿ ಹಾಗೂ ಅರೆ ಸರಕಾರಿ ಸಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ಇದರಿಂದ ಕೋಟ್ಯಾಂತರ ಯುವಜನತೆ ಕೆಲಸ ಕಳೆದು ಕೊಂಡು ನಿರುದ್ಯೋಗಿಗಳಾ ಗುತಿದ್ದಾರೆ ಎಂದವರು ದೂರಿದರು.
ಬರೇ ಬಂಡವಾಳಶಾಹಿಗಳನ್ನು ನೆಚ್ಚಿಕೊಂಡು ಆಡಳಿತ ನಡೆಸುತ್ತಿರುವ ಈ ಸರಕಾರಕ್ಕೆ ಜನರ ಬದುಕಿನ ಬಗ್ಗೆ ಯಾವುದೇ ಬದ್ದತೆ ಇಲ್ಲ ಎಂಬುದು ಖಚಿತವಾಗಿದೆ. ವಾಸ್ತವ ಅಲ್ಲದ, ಬರೇ ಸುಳ್ಳು ಹೇಳಿಕೆಗಳ ಮೂಲಕ ಜನರು ಭ್ರಮಾಲೋಕದಲ್ಲಿ ಇರುವಂತೆ ಮಾಡಿರುವ ಸರಕಾರದ ಜನವಿರೋಧಿ ನೀತಿ ನಿಧಾನವಾಗಿಯಾದರೂ ಜನರಿಗೆ ಅರಿವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆಯ ಮೂಲಕ ಪಕ್ಷವನ್ನು ಜನರ ಬಳಿಕ ಕೊಂಡೊಯ್ಯುವುದ ರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ಕುರಿತು ಅರಿವು ಮೂಡಿಸುವ ಉದ್ದೇಶವನ್ನು ಪಕ್ಷ ಹೊಂದಿದೆ ಎಂದು ಕೊಡವೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ವಿನಯಕುಮಾರ ಸೊರಕೆ, ಬಿ.ನರಸಿಂಹ ಮೂರ್ತಿ, ದಿನೇಶ್ ಪುತ್ರನ್, ಹಬೀಬ್ ಅಲಿ, ಹರೀಶ್ ಕಿಣಿ, ಭಾಸ್ಕರ ರಾವ್ ಕಿದಿಯೂರು, ಬ್ಲಾಕ್ ಅಧ್ಯಕ್ಷರಾದ ನವೀನ್‌ಚಂದ್ರ ಸುವರ್ಣ, ದಿನಕರ ಹೇರೂರು, ಶಂಕರ್ ಕುಂದರ್, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ಘಟಕಗಳ ಅಧ್ಯಕ್ಷರಾದ ಗೀತಾ ವಾಗ್ಳೆ, ಶಶಿಧರ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ರೋಶನಿ ಒಲಿವರ್, ಕಿಶೋರ್ ಎರ್ಮಾಳ್, ಹರೀಶ್ ಪಾಂಗಾಳ, ಕುಶಲ ಶೆಟ್ಟಿ, ವೈ. ಸುಕುಮಾರ್ ಉಪಸ್ಥಿತರಿದ್ದರು.