×
Ad

ಮಾ.8ಕ್ಕೆ 60ನೇ ‘ತಿಂಗಳೆ ಸಾಹಿತ್ಯೋತ್ಸವ’

Update: 2021-02-19 19:02 IST

ಉಡುಪಿ, ಫೆ.19: ಇತಿಹಾಸ ಪ್ರಸಿದ್ಧ ತಿಂಗಳೆಯ ಕಾರಣಿಕದ ಶಿವರಾಯ ಹಾಗೂ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ಉತ್ಸವದ ಸಂದರ್ಭ ದಲ್ಲಿ ಕಳೆದ 60 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ‘ತಿಂಗಳೆ ಸಾಹಿತ್ಯೋತ್ಸವ’ ಕಾರ್ಯಕ್ರಮ ಈ ಬಾರಿ ಮಾರ್ಚ್ 8ರಂದು ಸಂಜೆ 6ರಿಂದ ತಿಂಗಳೆಯಲ್ಲಿ ನಡೆಯಲಿದೆ.

ನಾಡಿನ ಖ್ಯಾತ ಅಂಕಣಕಾರ, ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ 60ನೇ ಸಾಹಿತ್ಯೋತ್ಸವದ ಸಂದರ್ಭ ದಲ್ಲಿ ಇತ್ತೀಚೆಗೆ ಅಗಲಿದ ಹಾಗೂ ತಿಂಗಳೆಗೆ ಕಳೆದ 45 ವರುಷಗಳಿಂದ ಸತತವಾಗಿ ಬಂದು ಉಪನ್ಯಾಸ ನೀಡುತ್ತಿದ್ದ ಬನ್ನಂಜೆ ಗೋವಿಂದಾ ಚಾರ್ಯರ ಸಂಸ್ಮರಣೆಯೂ ಸಹ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಡಾ. ವೀಣಾ ಬನ್ನಂಜೆ, ಅಂಬಾತನಯ ಮುದ್ರಾಡಿ ಹಾಗೂ ರಮಾನಾಥ ಆಚಾರ್ಯ ಅವರು ಬನ್ನಂಜೆ ಗೋವಿಂದಾ ಚಾರ್ಯರ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಉದ್ಯಮಿ ಡಿ.ಎ ಶ್ರೀನಿವಾಸ್ ಪಾಲ್ಗೊಳ್ಳಲ್ಲಿದ್ದಾರೆ.

ಕವಿತಾ ಉಡುಪ ಅವರು ಬನ್ನಂಜೆ ರಚಿಸಿದ ಕವನಗಳನ್ನು ಹಾಡಲಿದ್ದು, ಪುತ್ತೂರಿನ ಜಗದೀಶ್ ಆಚಾರ್ಯ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ. ಮಾರ್ಚ್ 6ರಿಂದ 9ರವರೆಗೆ ತಿಂಗಳೆಯ ಧರ್ಮ ದೈವಗಳ ನೇಮೋತ್ಸವವು ಜರಗಲಿದ್ದು ಮಾರ್ಚ್ 8ರ ರಾತ್ರಿ 9:30ಕ್ಕೆ ಪ್ರಸಿದ್ಧ ತಿಂಗಳೆಯ ಶಿವರಾಯ ದೈವದ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News