"ವಿಪರೀತ ಸಹನೆ ಕೂಡ ಹಾನಿಕರ": ರಿಹಾನ್ನಾ ಫೋಟೊ ಕುರಿತು ವಿಹಿಂಪ ಮುಖಂಡ ಚಂಪತ್ ರಾಯ್ ಹೇಳಿಕೆ

Update: 2021-02-19 16:02 GMT

ಹೊಸದಿಲ್ಲಿ: ವಿಪರೀತ ಸಹನೆ ಕೂಡ ಹಾನಿಕರವಾಗಿದೆ. ತಾಳ್ಮೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಪಾಪ್ ತಾರೆ ರಿಹಾನ್ನಾ ಅವರ ಫೋಟೊ ವಿವಾದದ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

ಭಗವಾನ್ ಗಣೇಶನ ಪೆಂಡೆಂಟ್ ಧರಿಸಿದ್ದ ಅರೆನಗ್ನ ಫೋಟೊವನ್ನು ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದ ರಿಹಾನ್ನ ಸಾಮಾಜಿಕ ಜಾಲ ತಾಣದಲ್ಲಿ ವಿವಾದಕ್ಕೆ ಸಿಲುಕಿದ್ದರು. ದಿಲ್ಲಿಯಲ್ಲಿ ರೈತರ ಪ್ರತಿಭಟನೆಯ ಸ್ಥಳದಲ್ಲಿ  ಇಂಟರ್ ನೆಟ್ ನಿರ್ಬಂಧದ ಕುರಿತಂತೆ ರಿಹಾನ್ನಾ ಮಾಡಿದ್ದ ಟ್ವೀಟ್ ವಿವಾದಕ್ಕೆ ಒಳಗಾದ ಕೆಲವೇ ದಿನಗಳ ಬಳಿಕ ರಿಹಾನ್ನಾ ತನ್ನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮತ್ತೊಮ್ಮೆ ವಿವಾದಕ್ಕೊಳಗಾಗಿದ್ದರು. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಯ್, “ತುಂಬಾ ಸಹನೆ ಕೂಡ ಕೆಟ್ಟ ವಿಷಯ. ಯಾರಾದರು ತಮ್ಮ ಮಿತಿಯನ್ನು ಮೀರಿದರೆ ಅದು ಎಲ್ಲರಿಗೂ ಸಮಸ್ಯೆಯನ್ನು ಸೃಷ್ಟಿಸುತ್ತದೆ’’ ಎಂದರು. 
ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಹಾಗೂ ಹಿಂದೂ ವಿರೋಧಿ ಟೀಕೆಗಳನ್ನು ಮಾಡುವವರು ಸಹನೆ,ಶಾಂತಿ  ಹಾಗೂ ತಾಳ್ಮೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಅವರು ಬೆಟ್ಟು ಮಾಡಿದರು.

ನಾನು ಈ ವಿಚಾರವನ್ನು ನಿರ್ಲಕ್ಷಿಸಲು ಸಿದ್ಧವಿದ್ದೇನೆ. ಆದರೆ, ಎಲ್ಲರೂ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ನಾನು ಉದಾರವಾದಿಯಾಗಿದ್ದರೆ, ಅದನ್ನು ಯಾರೂ ದುರುಪಯೋಗಪಡಿಸಿಕೊಳ್ಳಬಾರದು.  ನಾನು ಉದಾರವಾಗಿದ್ದರೆ, ನನ್ನ ಮಗ ಕೂಡ ಉದಾರನಾಗಿರುವುದು ಅನಿವಾರ್ಯವಲ್ಲ. ಹೀಗಾಗಿ ಜಾಗಕೂಕರಾಗಿರಿ. ಎಲ್ಲರೂ ಒಂದೇ ರೀತಿ ಇರುವುದಿಲ್ಲ. ತಮ್ಮನ್ನು ಸಂವೇದನಾಶೀಲರೆಂದು ಭಾವಿಸುವವರು ಮಾತ್ರ ಮುಂದೆ ಬಂದು ಅಂತಹ ವಿಷಯಗಳ ಬಗ್ಗೆ ಮಾತನಾಡಬೇಕು. ನಾವು ಏನನ್ನೂ ಮಾತನಾಡಬಾರದು. ಏಕೆಂದರೆ ನಾವು ಮಾತನಾಡಿದರೆ ಅದು ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ವಿಶ್ವ ಹಿಂದೂ ಪರಿಷತ್ನ ಉಪಾಧ್ಯಕ್ಷರೂ ಆಗಿರುವ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News