×
Ad

‘ಜಾಮಿಯಾ ಇಸ್ಲಾಮಿಯಾ ಮಂಗಳೂರು’ ಶಿಕ್ಷಣ ಸಂಸ್ಥೆಯ ಪ್ರಚಾರಾರ್ಥ ಸಭೆ

Update: 2021-02-19 22:33 IST

ಮಂಗಳೂರು, ಫೆ.19: ಬೋಳಾರ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಬೋಳಾರ ಇಸ್ಲಾಮಿಕ್ ಸೆಂಟರ್ ಮಂಗಳೂರು ಇದರ ವತಿಯಿಂದ ಸ್ಥಾಪಿಸಲಾಗುವ ‘ಜಾಮಿಯಾ ಇಸ್ಲಾಮಿಯಾ ಮಂಗಳೂರು’ ಶಿಕ್ಷಣ ಸಂಸ್ಥೆಯ ಪ್ರಚಾರಾರ್ಥದ ಸಭೆಯು ಶುಕ್ರವಾರ ನಗರದ ಬೋಳಾರದ ಶಾದಿಮಹಲ್‌ನಲ್ಲಿ ಜರಗಿತು.

ಸಭೆಯಲ್ಲಿ ದಿಕ್ಸೂಚಿ ಭಾಷಣಗೈದ ನಗರದ ಬಂದರ್‌ನ ಕಚ್ಚಿಮೆಮನ್ ಮಸೀದಿಯ ಇಮಾಮ್ ವೌಲಾನ ಶೊಹೈಬ್ ಹುಸೈನಿ ನದ್ವಿ ‘ಇಸ್ಲಾಮ್ ವಿದ್ಯೆಗೆ ಅತೀ ಹೆಚ್ಚು ಮಹತ್ವ ನೀಡಿದೆ. ಆರೋಗ್ಯಪೂರ್ಣ ಮತ್ತು ಮಾದರಿ ಸಮಾಜ ನಿರ್ಮಾಣಕ್ಕೆ ಶಿಕ್ಷಣದ ಅತ್ಯಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿವೆ. ಶೈಕ್ಷಣಿಕ ಹಬ್ ಆಗಿ ಪರಿವರ್ತನೆ ಹೊಂದುತ್ತಿರುವ ಮಂಗಳೂರಿನಲ್ಲಿ ಇಸ್ಲಾಮೀ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣವನ್ನು ಒಂದೇ ಕಡೆ ಲಭಿಸುವಂತಹ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ನಾವು ನಮ್ಮ ಮಕ್ಕಳನ್ನು ವೈದ್ಯರು, ಇಂಜಿನಿಯರು, ವಕೀಲರಾಗಬೇಕು ಎಂದು ಆಶಿಸುತ್ತೇವೆ. ಆದರೆ ಇಸ್ಲಾಮಿಕ್ ವಿದ್ವಾಂಸ ಆಗಬೇಕು ಎಂದು ಬಯಸುವುದಿಲ್ಲ. ಇದು ಸರಿಯಲ್ಲ. ನಮ್ಮ ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಪರಿಣತರಾಗಬೇಕು. ಇಸ್ಲಾಮಿಕ್ ಪಂಡಿತರಾಗಿ ಸಮುದಾಯಕ್ಕೆ ನೇತೃತ್ವ ನೀಡುವವರಾಗಬೇಕು. ಮುಸ್ಲಿಂ ಸಮಾಜದ ಶಿಕ್ಷಣ ವ್ಯವಸ್ಥೆಯು ಸಮತೋಲನ ತಪ್ಪಿದೆ. ಅದನ್ನು ಹೋಗಲಾಡಿಸಲು ಈ ಶಿಕ್ಷಣ ಸಂಸ್ಥೆ ಯಲ್ಲಿ ಶರೀಅತ್ ಕಲಿಕೆಯ ಜೊತೆಗೆ ವೈಜ್ಞಾನಿಕ, ಆಧುನಿಕ ಶಿಕ್ಷಣವೂ ಸಿಗಬೇಕಿದೆ. ಅರಬಿಕ್, ಉರ್ದು, ಇಂಗ್ಲಿಷ್‌ನಲ್ಲಿ ಪರಿಣತಿ ಪಡೆಯುವ ವ್ಯವಸ್ಥೆಯನ್ನೂ ಕಲ್ಪಿಸಬೇಕಿದೆ. ಅದಕ್ಕಾಗಿ ಎಲ್ಲರೂ ಪರಿಶ್ರಮಪಡಬೇಕಿದೆ ಎಂದು ಮೌಲಾನ ಶೊಹೈಬ್ ಹುಸೈನಿ ನದ್ವಿ ಹೇಳಿದರು.

ಮೌಲಾನ ಯಹ್ಯಾ ತಂಙಳ್ ಮದನಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೋಳಾರ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಕೆ.ಎಂ. ಶರೀಫ್, ಎಸ್.ಎ.ಖಲೀಲ್, ಎಂಐ ಖಲೀಲ್, ಶೌಕತ್ ಹುಸೈನ್, ಕೆಸಿಸಿಐ ಮಾಜಿ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.

ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಕೆ.ಎಂ.ಅಶ್ರಫ್ ‘ಜಾಮಿಯಾ ಇಸ್ಲಾಮಿಯಾ ಮಂಗಳೂರು’ ಶಿಕ್ಷಣ ಸಂಸ್ಥೆಯಲ್ಲಿ 6 ವರ್ಷದ ಆಲಿಮಿಯತ್ ಕೋರ್ಸ್‌ನ ಜೊತೆಗೆ ಪಿಯುಸಿ, ಪದವಿ ವ್ಯಾಸಂಗ ಮಾಡುವ ಅವಕಾಶವೂ ಇದೆ’ ಎಂದರು.

ಮೌಲಾನಾ ಶಫೀಉಲ್ಲಾ ಕಿರಾಅತ್ ಪಠಿಸಿದರು. ರಹ್ಮತುಲ್ಲಾ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News