18ನೇ ವರ್ಷದ 'ಕೋಟಿ-ಚೆನ್ನಯ' ಜೋಡುಕರೆ ಕಂಬಳಕ್ಕೆ ಚಾಲನೆ

Update: 2021-02-20 16:23 GMT

ಮೂಡುಬಿದಿರೆ: ಇಲ್ಲಿನ 'ಕೋಟಿ-ಚೆನ್ನಯ' ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ 'ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ'ದ ಕೋಟಿ-ಚೆನ್ನಯ ಜೋಡುಕರೆಯಲ್ಲಿ ನಡೆಯುವ 18ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವವು ಶನಿವಾರ ಬೆಳಿಗ್ಗೆ ಆರಂಭಗೊಂಡಿತು. 

ಚೌಟರ ಅರಮನೆಯ ಕುಲದೀಪ್ ಎಂ. ಅಧ್ಯಕ್ಷತೆಯಲ್ಲಿ ಆಲಂಗಾರು ಚರ್ಚ್‍ನ ಧರ್ಮಗುರು ರೆ.ಫಾ.ವಾಲ್ಟರ್ ಡಿಸೋಜಾ, ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ವೇ/ಮೂ/ಈಶ್ವರ ಭಟ್, ಪುತ್ತಿಗೆ ನೂರಾನಿ ಮಸ್ಜೀದ್‍ನ ಮೌಲಾನ ಝಿಯಾವುಲ್ಲ ಹಾಗೂ ಸುಧೀರ್ ಕುಂಟಾಡಿ ಸೇರಿ ಕಂಬಳದ ಕರೆಗಳಿಗೆ ದೇವಸ್ಥಾನಗಳ ಪ್ರಸಾದನ್ನು ಹಾಕಿ ನಂತರ ದೀಪವನ್ನು ಬೆಳಗಿಸುವ ಮೂಲಕ ಕಂಬಳಕ್ಕೆ ಚಾಲನೆಯನ್ನು ನೀಡಿದರು. 

ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿ, ನಮ್ಮ ಜಾನಪದ ಕಲೆಗಳು, ಸಾಹಸ ಕ್ರೀಡೆಗಳು ಉಳಿಯಬೇಕು. ಕಂಬಳ ಜಾನಪದ ಕ್ರೀಡೆಯಾದರೂ ಇದರಲ್ಲಿ ಜೀವನ ಪಾಠವಿದೆ. ಆತ್ಮವಿಶ್ವಾಸ ತುಂಬಿದ ಮತ್ತು ಧೈರ್ಯದಿಂದ ಕೂಡಿದ ಕ್ರೀಡೆಯಾಗಿದೆ. ಇಲ್ಲಿ ಪ್ರಾಣಿಗಳಿಗೆ ಹಿಂಸೆಯಾಗದ ರೀತಿಯಲ್ಲಿ ಜನರಿಗೆ ಮನರಂಜನೆ ಸಿಗಲಿ. ನಮ್ಮ ಕಲೆಗಳು, ಕ್ರೀಡೆ, ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾಗಿದೆ. ಕಂಬಳವು ಕೋವಿಡ್ ಸಂದರ್ಭದಲ್ಲಿ ನಡೆಯುತ್ತಿರುವುದರಿಂದ ಮಾಸ್ಕನ್ನು ಕಡ್ಡಾಯವಾಗಿ ಬಳಸಿ ಕೋವಿಡ್ ನಿಯಾಮಾವಳಿಗಳನ್ನು ಪಾಲಿಸಿ ಎಂದು ಸಲಹೆ ನೀಡಿದರು. 

ಮೂಡುಬಿದಿರೆ ಕಂಬಳವನ್ನು15 ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ್ದ  ಮಾಜಿ ಸಚಿವ ಅಭಯಚಂದ್ರ ಜೈನ್ ಗೌರವಾಧ್ಯಕ್ಷರ ನೆಲೆಯಲ್ಲಿ ಮಾತನಾಡಿ, ಪಕ್ಷಗಳ ಕಾರ್ಯಕ್ರಮಗಳನ್ನು ನಡೆಸಲು ಬೇರೆ ಬೇರೆ ಕಡೆಗಳಿಂದ ಟೆಂಪೋದಲ್ಲಿ ಜನರು ಕರೆದುಕೊಂಡು ಬರಬೇಕಾಗಿದೆ ಆದರೆ ಕಂಬಳಕ್ಕೆ ಜನರು ಅವರಾಗಿಯೇ ಬಂದು ಸೇರುತ್ತಾರೆ ಇದು ತುಳುನಾಡಿನ ವೈಶಿಷ್ಠ್ಯತೆ. ಈಗಿನ  ಶಾಸಕರು ಪ್ರೋತ್ಸಾಹ ಕೊಟ್ಟು ಎಲ್ಲಾ ಜನರನ್ನು ಸೇರಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಮೂಡುಬಿದಿರೆ ಕಂಬಳವನ್ನು  ದೇಶದಲ್ಲಿ ಮಾದರಿ ಕಂಬಳ ಎಂದು ತೋರಿಸಿ ಕೊಡುವಂತಾಗಲಿ ಎಂದರು. 

ಕಂಬಳ ಸಮಿತಿಯ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ರಾಜಕೀಯ ಚುನಾವಣೆಯ ಸಂದರ್ಭದಲ್ಲಿ ಮಾತ್ರ. ಊರಿನ ಅಭಿವೃದ್ಧಿಯಾಗಬೇಕಾದರೆ ನಾವೆಲ್ಲರೂ  ಸೇರಿದರೆ ಮಾತ್ರ ಸಾಧ್ಯ. ಅಭಯಚಂದ್ರ ಜೈನ್ ಅವರು 2 ವರ್ಷಗಳ ನಂತರ ಕಂಬಳಕ್ಕೆ ಬಂದಿರುವುದು ತನಗೆ ಖುಷಿಕೊಟ್ಟಿದೆ. ಕಂಬಳಕ್ಕಾಗಿ ಗುಣಪಾಲ ಕಡಂಬ ಮತ್ತು ಭಾಸ್ಕರ್ ಕೋಟ್ಯಾನ್ ಹೇಗೆ ಕೆಲಸ ಮಾಡುತ್ತಾರೋ ಹಾಗೆ ನಾನು ಮತ್ತು ನೀವು ಕೋಟಿ-ಚೆನ್ನಯರಂತೆ ಕೆಲಸ ಮಾಡೋಣ ಎಂದು ಅಭಯಚಂದ್ರರಲ್ಲಿ ವಿನಂತಿಸಿದರು.  

ಚಿತ್ರರಂಗದಲ್ಲಿ 3 ಬಾರಿ ಫಿಲಂಫೇರ್ ಪ್ರಶಸ್ತಿಯನ್ನು ಪಡೆದಿರುವ ರಾಜೇಂದ್ರ ಸಿಂಗ್ ಬಾಬು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಎಂ, ಜಿ.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲ್, ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಜಿ.ಪಂ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಪುರಸಭಾ ಅಧ್ಯಕ್ಷ ಪ್ರಸಾದ್ ಭಂಡಾರಿ, ಸದಸ್ಯರಾದ ನಾಗರಾಜ ಪೂಜಾರಿ, ಸುರೇಶ್ ಕೋಟ್ಯಾನ್, ಸೌಮ್ಯ ಶೆಟ್ಟಿ, ರಾಜೇಶ್ ನಾಯ್ಕ್, ಸ್ವಾತಿ ಶಿವಾನಂದ ಪ್ರಭು, ಜಯಶ್ರೀ, ಕುಶಲ ದೇವಾಡಿಗ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಬಸದಿಗಳ ಮುಕ್ತೇಸರ ದಿನೇಶ್ ಆನಡ್ಕ, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಡಾ. ಸುದೀಪ್ ಕುಮಾರ್, ರೋಟರಿ ಕ್ಲಬ್ ಟೆಂಪಲ್ ಟೌನ್‍ನ ಅಧ್ಯಕ್ಷ ಸೀತಾರಾಮ ಆಚಾರ್ಯ ಉದ್ಯಮಿ ವಿಶ್ವನಾಥ ಪ್ರಭು ಕಂಬಳ ಸಮಿತಿಯ ಕೋಶಾಧಿಕಾರಿ, ಭಾಸ್ಕರ್ ಎಸ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಹಾಗೂ ಗ್ರಾ.ಪಂ ಅಧ್ಯಕ್ಷರುಗಳು ಈ ಸಂದರ್ಭ ಉಪಸ್ಥಿತರಿದ್ದರು.

ಕಂಬಳ ಉದ್ಘಾಟನೆಗೂ ಮೊದಲು ಒಂಟಿಕಟ್ಟೆಯ ಅಯ್ಯಪ್ಪ ಮಂದಿರದಲ್ಲಿ ಪೂಜೆಯನ್ನು ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News