×
Ad

ಕಾಪು ಪೊಲೀಸ್ ವಸತಿ ಗೃಹ ಉದ್ಘಾಟನೆ

Update: 2021-02-20 22:49 IST

ಕಾಪು: ಪೊಲೀಸ್ ಇಲಾಖೆಯ ಗೃಹ 2025 ಯೋಜನೆಯಡಿ 10,400 ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಶೇ. 65ರಷ್ಟು ಪೊಲೀಸರಿಗೆ ಮನೆಗಳನ್ನು ನೀಡಿದಂತಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. 

ಶನಿವಾರ ಕಾಪು ಪೊಲೀಸ್ ಠಾಣೆಯ ಸಮೀಪದಲ್ಲಿ ನೂತನವಾಗಿ ನಿರ್ಮಿಸಲಾದ ನಾಲ್ಕು ಅಂತಸ್ತಿನ ಪೊಲೀಸ್ ವಸತಿ ಗೃಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯ ಗೃಹ 2020 ಯೋಜನೆಯಡಿ 11 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದ್ದು ಈ ಆರ್ಥಿಕ ವರ್ಷಾಂತ್ಯದೊಳಗೆ ಎಲ್ಲಾ ಮನೆಗಳನ್ನೂ ಹಸ್ತಾಂತರಿಸಲಾಗುವುದು. ಈ ಯೋಜನೆಯಡಿ ಇಂದು ಉಡುಪಿ ಜಿಲ್ಲೆಯ ಕಾಪುವಿನಲ್ಲಿ 16 ಮತ್ತು ಕಾರ್ಕಳದಲ್ಲಿ 48 ಮನೆಗಳನ್ನು ನಿರ್ಮಿಸಿ, ಮನೆಗಳನ್ನು ಹಸ್ತಾಂತರಿಸಲಾಗಿದೆ ಎಂದರು. 

ಮುಂದಿನ ಯೋಜನೆಗಾಗಿ  ಕಳೆದ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಅನುದಾನ ಮೀಸಲಿಟ್ಟಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಗೃಹ 2025 ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಈ ಮೂಲಕ ದೇಶದಲ್ಲಿಯೇ ಅತೀ ಹೆಚ್ಚು ವಸತಿ ಹಂಚಿಕೆ ಮಾಡಿದಂತಾಗುತ್ತದೆ ಎಂದರು. 

16 ಕುಟುಂಬಗಳಿಗೆ ವಸತಿ: ಕಾಪು ಪೊಲೀಸ್ ಠಾಣೆಯ ಪಕ್ಕದಲ್ಲೇ ಸುಮಾರು 3.57 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಾಲ್ಕು ಅಂತಸ್ತಿನ ಕಾಮಗಾರಿಗೆ 2018ರಲ್ಲಿ ಚಾಲನೆ ನೀಡಲಾಗಿತ್ತು. ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ವಸತಿ ಸಮುಚ್ಚಯ ನಿರ್ಮಾಣಗೊಂಡಿದ್ದು, ಕಟ್ಟಡದಲ್ಲಿ 16 ಕುಟುಂಬಗಳು ನೆಲೆಸಬಹುದು. 

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಭರತ್ ರೆಡ್ಡಿ, ಕಾಪು ವೃತ್ತ ನೀರಿಕ್ಷಕ ಪ್ರಕಾಶ್, ಕಾಪು ಎಸ್ಸೈ ರಾಘವೇಂದ್ರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಕಾಪು ಪುರಸಭೆಯ ಅಧ್ಯಕ್ಷ ಅನಿಲ್ ಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಿಲ್ಪಾ ಜಿ. ಸುವರ್ಣ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News