ಕನ್ನಡ ಭವನ ತಾಲೂಕಿಗೆ ಹೆಮ್ಮೆ ತಂದಿದೆ: ರಮಾನಾಥ ರೈ

Update: 2021-02-20 18:01 GMT

ಬಂಟ್ವಾಳ, ಫೆ.20: ಬಿ.ಸಿ.ರೋಡಿನ ಕೈಕುಂಜೆಯಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕನ್ನಡ ಭವನ ಹಾಗೂ ಸಾರ್ವಜನಿಕ ರಂಗಮಂದಿರವನ್ನು ಶನಿವಾರ ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಲಾಯಿತು. 

ಮಾಜಿ ಸಚಿವ ರಮಾನಾಥ ರೈ ಕನ್ನಡ ಭವನ ಉದ್ಘಾಟನೆಗೈದು ದಾನಿಗಳ ನಾಮಫಲಕವನ್ನು ಅನಾವರಣಗೊಳಿಸಿದರು. ಬಳಿಕ  ಮಾತನಾಡಿದ ಅವರು, ಕನ್ನಡ ಭವನವನ್ನು ನಿರ್ಮಿಸಿ ಲೋಕಾರ್ಪಣೆ ಮಾಡುವುದು ಕನ್ನಡದ ಕೆಲಸವಾಗಿದ್ದು ಇಲ್ಲಿನ ಜನರ ಬಹು ನಿರೀಕ್ಷೆಯ ಕನ್ನಡ ಭವನದ ನಿರ್ಮಾಣ ತಾಲೂಕಿನ ಜನತೆಗೆ ಹೆಮ್ಮೆ ತಂದಿದೆ ಎಂದರು. 

ತಾಲೂಕಿನಲ್ಲಿ ಪಂಜೆ ಮಂಗೇಶರಾಯರ ಭವನದ ಅಭಿಲಾಷೆ ಹೊಂದಿದ್ದು ಅದರ ಭಾಗಶಃ ಕಾಮಗಾರಿ ಪೂರ್ಣಗೊಂಡು ಈಗ ಆರ್ಧಕ್ಕೆ ನಿಂತಿದೆ. ತನ್ನ ಅಧಿಕಾರದ ಅವಧಿಯಲ್ಲಿ 5 ಕೋಟಿ ರೂ. ಮಂಜೂರುಗೊಳಿಸಿ ಹೆಚ್ಚುವರಿಯಾಗಿ 3 ಕೋಟಿ ರೂ. ಸೇರಿ ಒಟ್ಟು 8 ಕೋಟಿ ರೂ.ನ ಕಟ್ಟಡ ಪಂಜೆಯವರ ಮನೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿದೆ. ಕನ್ನಡದ ವಿಚಾರದಲ್ಲಿ ಸಂಶೋಧನ ಸಂಸ್ಥೆಯಾಗಿ ಪಂಜೆ ಭವನ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. 

ಭಾಷಾ ವಿಚಾರದಲ್ಲಿ ಕರ್ನಾಟಕದಲ್ಲಿ ಯಾವುದೇ ಗೊಂದಲಗಳು ನಡೆದಿಲ್ಲ. ಕಾವೇರಿ ನದಿ ಹಾಗೂ‌ ಬೆಳಗಾಂ ಗಡಿ ವಿಚಾರದಲ್ಲಿ ಸಣ್ಣ ಪುಟ್ಟ ವಿವಾದ ನಡೆದಿದೆಯೇ ಹೊರತು ಕರ್ನಾಟಕದಲ್ಲಿ ಎಲ್ಲಾ ಭಾಷಿಕರು ಜೊತೆಯಾಗಿ ಬದುಕುತ್ತಿದ್ದಾರೆ ಎಂದು ರೈ ಹೇಳಿದರು. 

ಸಾರ್ವಜನಿಕ ರಂಗ ಮಂದಿರವನ್ನು ಶ್ರೀ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ಗೈದು,ಕನ್ನಡ ಮತ್ತು ತುಳು ಈ ಜಿಲ್ಲೆಯ ಜನತೆಗೆ ಇಬ್ಬರು ತಾಯಿಯಿದ್ದಾಗೆ. ತುಳು ಭಾಷೆ 8ನೇ ಪರಿಚ್ಚೇದಕ್ಕೆ ಸೇರ್ಪಡೆಯ ಜೊತೆಗೆ ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯಾಗಿ ಘೋಷಿಸಬೇಕು ಎಂಬುದು ಈ ಸಮ್ಮೇಳನದ ಧ್ಯೇಯವಾಗಬೇಕು ಎಂದರು. 

ವಿ.ಪ.‌ ಸದಸ್ಯ ಪ್ರತಾಪಸಿಂಹ ನಾಯಕ್ ಅವರು, ಹಿಂದಿನ 20 ತಾಲೂಕು ಸಾಹಿತ್ಯ ಸಮೇಳನ ಅಧ್ಯಕ್ಷರುಗಳ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಜನಸಾಮಾನ್ಯರ ಕಾರ್ಯಕ್ರಮವಾಗಿ ರೂಪಗೊಂಡಾಗ ಸಾಹಿತ್ಯ ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದರು. 

ಕನ್ನಡ, ತುಳು ನಮ್ಮ ಉಸಿರಾಗಬೇಕು: ಕೇಮಾರುಶ್ರೀ: ಶ್ರೀಕ್ಷೇತ್ರ ಕೇಮಾರು ಸಾಂದೀಪಿನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ್ ಸ್ವಾಮೀಜಿ ಅವರು ಆಶೀರ್ವನಗೈದು ಕನ್ನಡ ಮತ್ತು ತುಳು ನಮ್ಮ ಉಸಿರಾಗಬೇಕು, ಭಾಷೆಯಿಂದ ಸಂಸ್ಕೃತಿ ಉಳಿಯುತ್ತದೆ, ಜಾತಿ, ಭಾಷೇಗಾಗಿ ಜಗಳ‌ ದೇಶದ ಪ್ರಗತಿಯನ್ನು ಕುಂಠಿಸುತ್ತದೆ. ಸಂಸ್ಕೃತಿ, ಮೌಲ್ಯವನ್ನು ಉಳಿಸಿ, ದೀನದಲಿತರಲ್ಲಿ ದೇವರನ್ನು ಕಾಣುವ ಹೊಸ ಪರಿಕಲ್ಪನೆ ಮೂಡಿಸಲಿ ಎಂದು ಆಶಿಸಿದರು. 

ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅವರು ಪಂಜೆ, ಬಿ.ವಿ.ಕಾರಂತ್, ಏರ್ಯ ಲಕ್ಷ್ಮೀನಾರಾಯಣ ಆಳ್ವ, ನೀರ್ಪಾಜೆ ಭೀಮಭಟ್ ರವರ ಭಾವಚಿತ್ರ ಅನಾವರಣಗೊಳಿಸಿ ಶುಭ ಹಾರೈಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ ಯಕ್ಷಕಲಾವಿದ, ದಶಾವತಾರಿ ಗೋವಿಂದಭಟ್ ರವರು ತಾಲೂಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳ ನಾಮಫಲಕ ಹಾಗೂ  ಯಕ್ಷಗಾನದ ತಮ್ಮದೇ ವೇಷದ ಭಾವಚಿತ್ರ ಅನಾವರಣಗೊಳಿಸಿ ಶುಭಹಾರೈಸಿದರು. 

ಮುಹಮ್ಮದ್ ಯಾಸೀರ್ ಕಲ್ಲಡ್ಕ ಅವರ ಮ್ಯೂಸಿಯಂ ಪ್ರದರ್ಶನವನ್ನು ಶ್ರೀ ಶೃಂಗೇರಿ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಉದ್ಘಾಟನೆಗೈದು ಶುಭಶಂಶಾಸನೆಗೈದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಉದ್ಯಮಿ ರಘುನಾಥ ಸೋಮಯಾಜಿ ಅತಿಥಿಗಳಾಗಿ ಭಾಗವಹಿಸಿದ್ದರು. 

ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ತಾ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ಸಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಬಸ್ತಿ ವಾಮನ ಶೆಣ್ಯೆ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಸ್ವಾಗತ ಸಮಿತಿ ಅಧ್ಯಕ್ಷ ಐತಪ್ಪ ಆಳ್ವ, ಕಸಾಪ ಗೌರವ ಕಾರ್ಯದರ್ಶಿ ಡಾ.ನಾಗವೇಣಿ ಮಂಚಿ, ಭುವನಭಿರಾಮ ಉಡುಪ, ಸುದರ್ಶನ್ ಜೈನ್ ಮೊದಲಾದವರು ವೇದಿಕೆಯಲ್ಲಿದ್ದರು. 

ರಾಜ್ಯ‌ ಮಟ್ಟದ ಪುಸ್ತಕ ಸಂತೆಯನ್ನು ಆಯೋಜಿಸಲಾಗಿದೆ. ಪರಿಷತ್ ಧ್ವಜಾರೋಹಣಗೈದ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕಲ್ಕೂರ ಸಭಾಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ರಾಷ್ಟ್ರಧ್ವಜಾರೋಹಣಗೈದರು‌. ತಹಶೀಲ್ದಾರ್ ರಶ್ಮೀ ಎಸ್.ಆರ್. ಉಪಸ್ಥಿತರಿದ್ದರು. 

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ಕೆ.ಮೋಹನ್ ರಾವ್ ಪ್ರಸ್ತಾವಿಸಿ 20 ವರ್ಷಗಳ ಹಿಂದೆ ಆಗಿನ ತಾಲೂಕು ಕಸಾಪ ಅಧ್ಯಕ್ಷರಾಗಿದ್ದ ನೀರ್ಪಾಜೆ ಭೀಮ ಭಟ್ ಅವರು ಕನ್ನಡಭವನದ ಕನಸನ್ನು ಕಂಡು ಜಮೀನು ಗುರುತಿಸಿ ಶಿಲಾನ್ಯಾಸ ನೆರವೇರಿಸಿದ್ದರು. ಅವರ ಆ ಕನಸು ಕನ್ನಡಭವನ ಲೋಕಾರ್ಪಣೆಯ ಮೂಲಕ  ನೆರವೇರಿದೆ ಎಂದರು. 

ತಾಲೂಕು ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ವಂದಿಸಿದರು. ಬಿ.ರಾಮಚಂದ್ರ ರಾವ್ ಮತ್ತು ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.  

ವೈಭವದ ಮೆರವಣಿಗೆ: ಇದಕ್ಕು ಮುನ್ನ  ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಕೈಕುಂಜೆಯವರೆಗರ ಕನ್ನಡ ಭುವನೇಶ್ವರಿಯ ಭವ್ಯವಾದ ಮೆರವಣಿಗೆಯು ನಡೆಯಿತು. ಬಂಟ್ವಾಳ ಪಿರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಮೆರವಣಿಗೆಗೆ ಚಾಲನೆ ನೀಡಿದರು. ಮೊಡಂಕಾಪು ಚರ್ಚ್‌ ನ ಧರ್ಮಗುರುಗಳಾದ ವೆಲೇರಿಯನ್ ಡಿಸೋಜ ಇದ್ದರು. ಜೇಸಿ ಅಧ್ಯಕ್ಷೆ,ನ್ಯಾಯವಾದಿ ಶೈಲಜಾ ರಾಜೇಶ್ ಅವರು ಭುವನೇಶ್ವರಿಯಾಗಿ ತೆರೆದ ವಾಹನದಲ್ಲಿ ಗಮನಸೆಳೆದರು. ಗೊಂಬೆ ಕುಣಿತ, ಕೀಲುಕುದುರೆ, ಚೆಂಡೆ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News