ಕೇರಳ ಗಡಿಯಲ್ಲಿ ಕರ್ನಾಟಕ ಪ್ರವೇಶಕ್ಕೆ ನಿರ್ಬಂಧ: ನಾಗರಿಕರಿಂದ ಪ್ರತಿಭಟನೆ

Update: 2021-02-22 07:15 GMT

ಮಂಜೇಶ್ವರ: ಕೇರಳದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕರ್ನಾಟಕ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಗಡಿ ಪ್ರದೇಶದ ನಾಗರಿಕರಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. ಸೋಮವಾರ ತಲಪಾಡಿ ಗಡಿಯಲ್ಲಿ ತಪಾಸಣೆ ಆರಂಭಿಸಿದ್ದು, ಗಡಿ ಪ್ರದೇಶದ ಜನತೆ  ಗೊಂದಲಕ್ಕೀಡಾಗಿದ್ದಾರೆ. ವಿದ್ಯಾರ್ಥಿಗಳು, ನೌಕರರು, ರೋಗಿಗಳು ಹಾಗೂ ಇತರ ಪ್ರಯಾಣಿಕರು ಈ ನಿರ್ಬಂಧದಿಂದ ಗೊಂದಲಕ್ಕೀಡಾದರು. 

ಗಡಿಭಾಗ ತಲಪಾಡಿಯಲ್ಲಿ ಆರೋಗ್ಯ ಅಧಿಕಾರಿಗಳ ಪರಿಶೀಲನಾ ಕೇಂದ್ರ ಸೋಮವಾರದಿಂದ ಮತ್ತೆ ಆರಂಭಗೊಂಡಿದೆ. ಆರ್ ಟಿ  ಪಿಸಿ ಆರ್  ವರದಿ ಕೈಯಲ್ಲಿದ್ದಲ್ಲಿ ಮಾತ್ರ ಮಂಗಳವಾರದಿಂದ ಕರ್ನಾಟಕ ಪ್ರವೇಶಕ್ಕೆ ಅವಕಾಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ಬಾಯರಿ, ತಹಸೀಲ್ದಾರ್ ಗುರುಪ್ರಸಾದ್ ನೇತೃತ್ವದ ತಂಡ ತಲಪಾಡಿ ಗಡಿಭಾಗದಲ್ಲಿ ನಿಂತು ಕೇರಳದಿಂದ ಬರುವವರನ್ನು ತಡೆದು ಟೆಸ್ಟ್ ರಿಪೋಟ್೯ ನೀಡುವಂತೆ ಸೂಚಿಸಿದರು. ಬರುವವರ ಪೈಕಿ ಯಾರಲ್ಲಿಯೂ ರಿಪೋರ್ಟ್ ಇರದ ಕಾರಣ, ಮಂಗಳವಾರದಿಂದ ಕಡ್ಡಾಯವಾಗಿ ಆರ್ ಟಿ ಪಿಸಿಆರ್ ವರದಿ ತರುವಂತೆ ಸೂಚಿಸಿದರು. ನಾಳೆಯಿಂದ ವರದಿ ಇಲ್ಲದೇ ಇದ್ದಲ್ಲಿ ಮಂಗಳೂರು ಪ್ರವೇಶಿಸಲು ಬಿಡುವುದಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಕೇರಳದಿಂದ ಬರುವ ವಾಹನಗಳಿಗೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕೇರಳಕ್ಕೆ ತೆರಳುವ ವಾಹನಗಳನ್ನು ಗಡಿನಾಡು ಪ್ರದೇಶದ ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ಪ್ರತಿಭಟಿಸಿದರು. ಪ್ರತಿಭಟನಾಕಾರರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ದ.ಕ ಜಿಲ್ಲಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆಯಲ್ಲಿ ಪ್ರತಿಭಟಿಸಿದರು.

ಈ ನಡುವೆ ರಾ.ಹೆ ಯನ್ನು ತಡೆಯದಂತೆ ಉಳ್ಳಾಲ ಠಾಣಾಧಿಕಾರಿ ಸಂದೀಪ್ ಎಸ್. ಮುಂದಾದರೂ, ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ಮುಂದುವರೆಸಿದರು.

ಪ್ರತಿಭಟನಾ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಜತೆಗೆ ಮಾತನಾಡಿದ ಮಂಜೇಶ್ವರ ಸಿ.ಐ ಅರುಣ್ ದಾಸ್, ಕಾಸರಗೋಡು ಜಿಲ್ಲಾಡಳಿತದ ಜತೆಗೆ ಮಾತುಕತೆ ನಡೆಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಾಳೆ ಮತ್ತೆ ತೊಂದರೆಯಾದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News