×
Ad

ಕೋಟ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಬಂದ್: ಟೋಲ್‌ಗೇಟ್ ಎದುರು ಪ್ರತಿಭಟನೆ

Update: 2021-02-22 12:59 IST

ಕೋಟ, ಫೆ.22: ಸಾಸ್ತಾನ ಟೋಲ್‌ಗೇಟ್ ನಲ್ಲಿ ಕೋಟ ಜಿಪಂ ಕ್ಷೇತ್ರ ವ್ಯಾಪ್ತಿಯ ಸ್ಥಳೀಯರಿಗೆ ಟೋಲ್ ವಿನಾಯಿತಿ ಕಲ್ಪಿಸುವಂತೆ ಆಗ್ರಹಿಸಿ ಹಾಗೂ ಅಸಮರ್ಪಕ ಮತ್ತು ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಕೋಟ ಜಿಪಂ ಕ್ಷೇತ್ರದಲ್ಲಿ ಸ್ವಯಂ ಪ್ರೇರಿತ ಬಂದ್ ಆಚರಿಸಿ ಟೋಲ್‌ಗೇಟ್ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ. ಟೋಲ್ ಗೇಟ್ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸ್ಥಳೀಯರು, ನಮ್ಮದೇ ಜಾಗ ನಮ್ಮದೇ ರಸ್ತೆ ಸುಂಕ ಕೇಳಲು ನೀವು ಯಾರು ಎಂಬ ಘೋಷಣೆಗಳನ್ನು ಕೂಗುತ್ತ ಶುಲ್ಕ ವಿನಾಯಿತಿ ನೀಡುವಂತೆ ಒತ್ತಾಯಿಸಿದರು.

ಪ್ರತಿಭಟನಾ ಸಭೆಗೆ ಆಗಮಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸ್ಥಳೀಯರು ಮೀನು ಪೇಟೆಗೆ ಹೋಗಬೇಕಾದ್ರೆ ಟೋಲ್ ಹಣ ಕೊಟ್ಟು ಹೋಗುವುದು ಸರಿಯಲ್ಲ. ಸ್ಥಳೀಯರಿಗೆ ಅನ್ಯಾಯ ಆಗಲು ನಾವು ಬಿಡುದಿಲ್ಲ. ನಿಮ್ಮ ಜೊತೆ ನಾನು ಇದ್ದೇನೆ. ಇಂದು ನಡೆಯುವ ದಿಶಾ ಸಭೆಯಲ್ಲಿ ನಾನು ಚರ್ಚೆ ಮಾಡಿ ಸ್ಥಳೀಯರಿಗೆ ನ್ಯಾಯ ಕೊಡಿಸುತ್ತೆನೆ ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ವಿವಿಧ ಧಾರ್ಮಿಕ ನಾಯಕರು, ರಾಜಕೀಯ ಮುಖಂಡರು ಭಾಗವಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಪ್ರತಿಭಟನಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು.

ಬ್ರಹ್ಮಾವರ ತಾಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಜಿಪಂ ಮಾಜಿ ಅಧ್ಯಕ್ಷ ಕೇಶವ ಕುಂದರ್, ಸಾಸ್ತಾನ ಸಂತ ಅಂತೋನಿ ದೇವಾಲಯದ ಧರ್ಮಗುರು ವಂ ಜೋನ್ ವಾಲ್ಟರ್ ಮೆಂಡೋನ್ಸಾ, ಸ್ಥಳೀಯ ಜುಮಾ ಮಸೀದಿಯ ಧರ್ಮಗುರು ರಿಝ್ವಾನ್, ಪಾಂಡೇಶ್ವರ ಗ್ರಾಪಂ ಅಧ್ಯಕ್ಷೆ ಕಲ್ಪನಾ ದಿನಕರ್, ಉಪಾಧ್ಯಕ್ಷ ಲ್ವೆಸ್ಟರ್ ಡಿಸೋಜಾ, ಜಯ ಕರ್ನಾಟಕ ಸಂಘಟನೆಯ ಸತೀಶ್ ಪೂಜಾರಿ, ತಾಪಂ ಮಾಜಿ ಸದಸ್ಯ ರಾಜರಾಮ್, ಹೆದ್ದಾರಿ ಜಾಗೃತಿ ಸಮಿತಿಯ ಶ್ಯಾಮ್ ಸುಂದರ್ ನಾಯರಿ, ಆಲ್ವಿನ್ ಅಂದ್ರಾದೆ, ಪ್ರತಾಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ವಿಠಲ್ ಪೂಜಾರಿ, ಭೋಜ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News