ಸುಳ್ಯ: ಕೋವಿಡ್ ನಿಯಂತ್ರಣ- ಗಡಿಗಳಲ್ಲಿ ನಿರ್ಬಂಧ; ಆತಂಕದಲ್ಲಿ ಗಡಿನಾಡ ಜನತೆ

Update: 2021-02-22 07:54 GMT

ಸುಳ್ಯ: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಮಧ್ಯೆ ಸಂಚರಿಸುವ ಗಡಿ ರಸ್ತೆಯಲ್ಲಿ ನಿರ್ಬಂಧ ಹೇರಿ ದಕ್ಷಿಣ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾಡಿರುವ ಆದೇಶ ಸೋಮವಾರ ಬೆಳಗ್ಗಿನಿಂದ ಜಾರಿಯಾಗಿದ್ದು ಗಡಿ ರಸ್ತೆಗಳು ಬಂದ್ ಆಗಿದೆ.

ಸುಳ್ಯ ತಾಲೂಕನ್ನು ಸಂಪರ್ಕಿಸುವ ಕಾಸರಗೋಡು- ಸುಳ್ಯ ರಸ್ತೆಯಲ್ಲಿ ಜಾಲ್ಸೂರು ಮೂಲಕ ಮಾತ್ರ ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಇಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು ಆರೋಗ್ಯ ಇಲಾಖೆ, ಪೊಲೀಸ್ ಮತ್ತಿತರ ಇಲಾಖೆಗಳ ಸಿಬ್ಬಂದಿಗಳ ತಂಡ ಪರಿಶೀಲನೆ ನಡೆಸಿ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಇದ್ದ ವಾಹನ ಪ್ರಯಾಣಿಕರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಸುಳ್ಯ ಸಂಪರ್ಕಿಸುವ ಸುಳ್ಯ ಪಾಣತ್ತೂರು ರಸ್ತೆಯಲ್ಲಿ ಬಾಟೋಳಿ ಗಡಿಯಲ್ಲಿ, ಸುಳ್ಯ- ಬಂದಡ್ಕ ರಸ್ತೆಯ ಮಾಣಿಮೂಲೆ ರಸ್ತೆಯ ಕನ್ನಡಿತೋಡಿನಲ್ಲಿ ಮತ್ತು ಸುಳ್ಯ- ಅಡೂರು ರಸ್ತೆಯಲ್ಲಿ ಮಂಡೆಕೋಲು ಗಡಿಯಲ್ಲಿ ಅಂತಾರಾಜ್ಯ ರಸ್ತೆಗಳು ಬಂದ್ ಮಾಡಲಾಗಿದೆ. ಬ್ಯಾರಿಕೇಡ್ ಅಳವಡಿಸಿದ್ದು, ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ದ.ಕ.- ಕಾಸರಗೋಡು ಮಧ್ಯೆಯ ಬಹುತೇಕ ರಸ್ತೆಗಳ ಗಡಿ ಬಂದ್ ಮಾಡಲು ಆದೇಶಿಸಲಾಗಿದ್ದು ಕೆಲವು ಪ್ರಮುಖ ರಸ್ತೆಗಳ ಮೂಲಕ ಮಾತ್ರ ಷರತ್ತು ಬದ್ಧ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ.

ಕೇರಳದಿಂದ ದಕ್ಷಿಣ ಕನ್ನಡ ಪ್ರವೇಶಕ್ಕೆ ಮತ್ತು ನಿರ್ಗಮನಕ್ಕೆ ಮಂಗಳೂರು ತಾಲೂಕಿನ ತಲಪಾಡಿ ಮೂಲಕ, ಬಂಟ್ವಾಳ ತಾಲೂಕಿನ ಸಾರಡ್ಕ ಮೂಲಕ, ಪುತ್ತೂರಿನ ನೆಟ್ಟಣಿಗೆ ಮುಡ್ನೂರು, ಮೇಣಾಲ ಮೂಲಕ ಮತ್ತು ಸುಳ್ಯ ತಾಲೂಕಿನ ಜಾಲ್ಸೂರು ಮೂಲಕ ಪ್ರಯಾಣಕ್ಕೆ ಅನುಮತಿ ನೀಡಲಾಗಿದ್ದು ಮುಂದಿನ ಆದೇಶದರೆಗೆ ಉಳಿದೆಲ್ಲಾ ಗಡಿಗಳನ್ನು ಬಂದ್ ಮಾಡುವಂತೆ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ನೀಡಿದ್ದಾರೆ.

ತೆರೆದಿರುವ ಪ್ರತಿ ಪ್ರತಿ ಚೆಕ್ ಪೋಪೋಸ್ಟ್ ಗಳಲ್ಲಿ ಆರೋಗ್ಯ ಇಲಾಖೆ ತಪಾಸಣೆ ನಡೆಸಬೇಕು. ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬರು 72 ಗಂಟೆಗಳೊಳಗೆ ಕೋವಿಡ್ ಪರೀಕ್ಷೆ ನಡೆಸಲಾದ ನೆಗೆಟಿವ್ ವರದಿ ಕಡ್ಡಾಯವಾಗಿ ತರಬೇಕು. ಅದನ್ನು ಪರಿಶೀಲಿಸಿದ ಬಳಿಕ ಜಿಲ್ಲೆಗೆ ಪ್ರವೇಶ ಇರುತ್ತದೆ. ಪೊಲೀಸ್ ಇಲಾಖೆ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಬೇಕು. ಚೆಕ್ ಪೋಸ್ಟ್ ಗಳಲ್ಲಿ ಜಿಲ್ಲೆಯನ್ನು ಪ್ರವೇಶಿಸುವ ಪ್ರತಿಯೊಬ್ಬರನ್ನು ಪರಿಶೀಲನೆ ನಡೆಸಬೇಕು. ಎಲ್ಲಾ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೂಡಾ ಕಡ್ಡಾಯವಾಗಿ ನೆಗೆಟಿವ್ ವರದಿ ಇರುವ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಪ್ರಯಾಣಿಸಲು ಅವಕಾಶ ನೀಡಬೇಕು ಅದಕ್ಕೆ ಆಯಾ ಬಸ್ಸಿನ ನಿರ್ವಹಕರು ಕ್ರಮ ವಹಿಸಬೇಕು. ಉದ್ಯೋಗಕ್ಕಾಗಿ ಪ್ರತಿ ದಿನ ಪ್ರಯಾಣಿಸುವವರು ಪ್ರತಿ ಹದಿನೈದು ದಿನಕ್ಕೊಮ್ಮೆ ಕೋವಿಡ್ ನೆಗೆಟಿವ್ ವರದಿ ಚೆಕ್ ಪೋಸ್ಟ್ ಗೆ ಸಲ್ಲಿಸಬೇಕು. ಕೇರಳದಿಂದ ಬರುವ ವಿದ್ಯಾರ್ಥಿಗಳನ್ನು ಎಲ್ಲರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

ಕೊರೋನ ಹಿನ್ನಲೆಯಲ್ಲಿ ಕಳೆದ‌ ವರ್ಷ ನಾಲ್ಕು ತಿಂಗಳಿಗಿಂತಲೂ ಅಧಿಕ ಕಾಲ ಗಡಿ ರಸ್ತೆ ಬಂದ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗಡಿ ಪ್ರದೇಶದ ಜನರಿಗೆ ತೀವ್ರ ಸಂಕಷ್ಟ ಎದುರಾಗಿತ್ತು. ಇದೀಗ ಮತ್ತೆ ರಸ್ತೆ ಮುಚ್ಚಿರುವುದು ಗಡಿ ಪ್ರದೇಶದಲ್ಲಿ ವಾಸಿಸುವ ಜನರ ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News