ನಮ್ಮೂರ ಮಂದಿರದಲ್ಲಿರುವ ರಾಮ ದಶರಥನ ಮಗನೇ ಅಲ್ವಾ?: ಸಿದ್ದರಾಮಯ್ಯ ಪ್ರಶ್ನೆ

Update: 2021-02-22 09:05 GMT

ಉಡುಪಿ: ಜಿಲ್ಲೆಯ ಪಡುಬಿದ್ರಿಯಲ್ಲಿ ಕಾಂಗ್ರೆಸ್‌ ಆಯೋಜಿಸಿರುವ ʼಜನಧ್ವನಿʼ ಪಾದಯಾತ್ರೆಯಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ರಾಮ ಅಯೋಧ್ಯೆಯಲ್ಲಿ ಮಾತ್ರ ಇದ್ದಾನೆಯೇ? ನಮ್ಮೂರಿನ ಮಂದಿರದಲ್ಲಿ ಇರುವುದು ದಶರಥನ ಮಗ ರಾಮ ಅಲ್ಲವೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಪಾದಯಾತ್ರೆಯ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಪ್ರಸ್ತಾವದ ಕುರಿತಾದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, "ಸಂವಿಧಾನದ ಪ್ರಕಾರ ಸರಿಯೆನಿಸಿದ್ದನ್ನು ಮಾಡಬೇಕು. ಸರಕಾರಕ್ಕೆ ಮನವಿ ನೀಡಿದ್ದನ್ನು ತಪ್ಪೆಂದು ಹೇಳಲು ಸಾಧ್ಯವಿಲ್ಲ. ಈ ಕುರಿತು ಸರಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಐಎಮ್‌ಎ ಹಗರಣದಲ್ಲಿ ನನ್ನ ಪಾಲಿಲ್ಲ ಎಂದು ನಾನು ಹೇಳಿದ್ದೇನೆ. ನನಗೆ ಯಾರೂ ಹಣ ಕೊಟ್ಟಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿದರು.  ರಾಮಮಂದಿರದ ಕುರಿತು ನೀವೇನೇ ಮಾತನಾಡಿದರೂ ವಿವಾದವಾಗುತ್ತಿರುವುದು ಏಕೆ ಎಂದು ಪ್ರಶ್ನಿಸಿದಾಗ, ನಾನೇನು ವಿವಾದ ಸೃಷ್ಟಿಸಲಿಲ್ಲ. ನಮ್ಮೂರಿನಲ್ಲಿ ಕಟ್ಟುತ್ತಿರುವ ಮಂದಿರಕ್ಕೆ ನಾನು ದೇಣಿಗೆ ನೀಡುತ್ತಿದ್ದೇನೆ. ರಾಮ ಅಯೋಧ್ಯೆಯಲ್ಲಿ ಮಾತ್ರ ಇರುವುದಲ್ಲ. ನಮ್ಮೂರಲ್ಲಿ ಇರುವುದು ಇನ್ಯಾರು? ದಶರಥನ ಮಗ ರಾಮನೇ ಅಲ್ವಾ? ಎಂದು ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯರ ಕುರಿತು ʼಅವರಿಗೆ ದೇಶನಿಷ್ಠೆಯಿಲ್ಲʼ ಎಂದು ಹೇಳಿಕೆ ನೀಡಿದ್ದ ಪೇಜಾವರ ಸ್ವಾಮಿಯ ಕುರಿತು "ಒಬ್ರೂ ದೇಶಕ್ಕಾಗಿ ಸಾಯಲಿಲ್ಲ ಹಾಗಾಗಿ ನಾನು ದೇಶನಿಷ್ಠೆಯ ಕುರಿತು ಮಾತನಾಡುವುದಿಲ್ಲ. ನಾನು ಯಾವ ಸ್ವಾಮಿಯ ಬಗ್ಗೆಯೂ ಮಾತನಾಡಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.

ಬಳಿಕ ಅವರು ಪಡುಬಿದ್ರಿಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News